ನವ ದೆಹಲಿ:ದೇಶದ ಗಮನ ಸೆಳೆದಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆಗಳ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ಜೊತೆಗೆ ಆರು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಕೂಡ ಪ್ರಕಟವಾಗಲಿದೆ. ಮತ ಎಣಿಕೆಗೆ ಕೇಂದ್ರ ಚುನಾವಣಾ ಆಯೋಗ ಅಂತಿಮ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಎರಡು ವಿಧಾನಸಭೆಗಳು ಹಾಗೂ ಏಳು ಉಪಚುನಾವಣೆಗಳ ಮತ ಎಣಿಕೆಗೆ ಸಂಬಂಧಿಸಿದಂತೆ ಒಟ್ಟಾರೆ 116 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಬ್ಬ ಮತ ಎಣಿಕೆ ವೀಕ್ಷಕರನ್ನು ನಿಯೋಜಿಸಲಾಗಿದೆ. ಅದರಲ್ಲೂ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ತಲಾ ಇಬ್ಬರು ವಿಶೇಷ ವೀಕ್ಷಕರನ್ನು ನೇಮಿಸಲಾಗಿದೆ.
ಸ್ಟ್ರಾಂಗ್ ರೂಮ್ ಸೇರಿರುವ ಅಭ್ಯರ್ಥಿಗಳ 'ಭವಿಷ್ಯದ ಪೆಟ್ಟಿಗೆಗಳು' ಸಿಸಿಟಿವಿ ಕಣ್ಗಾವಲು ಮತ್ತು ಕೇಂದ್ರ ಸಶಸ್ತ್ರ ಪಡೆಗಳ ಭದ್ರತೆಯಲ್ಲಿ ಭದ್ರವಾಗಿದೆ. 8 ಗಂಟೆಯಿಂದ ಮೊದಲು ಅಂಚೆ ಮತಪತ್ರಗಳ ಎಣಿಕೆ ಆರಂಭವಾಗಲಿದೆ. ನಂತರ 8.30ರಿಂದ ಇವಿಎಂ ಮತಗಳ ಎಣಿಕೆಯು ಶುರುವಾಗಲಿದೆ. ಈಗಾಗಲೇ ರಾಜಕೀಯ ಪಕ್ಷಗಳ ಲೆಕ್ಕಾಚಾರ ಶುರುವಾಗಿದ್ದರೆ, ಅಭ್ಯರ್ಥಿಗಳ ಎದೆಬಡಿತ ಜೋರಾಗಿದೆ.
ಗುಜರಾತ್‌ನಲ್ಲಿ ಕಮಲ ಕಮಾಲ್?:ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ತವಕದಲ್ಲಿದೆ. ಕಳೆದ 27 ವರ್ಷಗಳಿಂದ ಸತತವಾಗಿ ಅಧಿಕಾರದ ಗದ್ದುಗೆಯಲ್ಲಿರುವ ಕಮಲ ಈ ಬಾರಿ ಕೂಡ ಕಮಾಲ್ ಮಾಡುವ ನಿರೀಕ್ಷೆಯಲ್ಲಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಕೂಡ ಕೇಸರಿ ಪಡೆಯ ಪರವಾಗಿಯೇ ಹೊರ ಬಿದ್ದಿದ್ದು, ಇಂದು ನಿಜವಾದ ಫಲಿತಾಂಶದತ್ತ ಇಡೀ ದೇಶದ ಚಿತ್ತ ನೆಟ್ಟಿದೆ.
182 ಸದಸ್ಯರ ಬಲದ ಗುಜರಾತ್ ವಿಧಾನಸಭೆಗೆ ಡಿ.1 ಮತ್ತು 5ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಆದರೆ, ಕಳೆದ 2017ರ ಚುನಾವಣೆಯ ಮತದಾನ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ ಮತದಾನವಾಗಿದೆ. ಈ ಹಿಂದೆ ಶೇ.71.28ರಷ್ಟು ಮತಗಳು ಚಲಾವಣೆಯಾಗಿದ್ದು, ಈ ಬಾರಿ ಇದು ಶೇ.66.13ಕ್ಕೆ ಕುಸಿದಿರುವುದು ಗಮನಿಸಬೇಕಾದ ಅಂಶ.