ಅಹಮದಾಬಾದ್:ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ನ್ಯಾಯಾಲಯದ ಧ್ಯೇಯವಾಕ್ಯ. ಆದರೆ, ಗುಜರಾತ್ನಲ್ಲಿ ಇಂಥದ್ದೊಂದು ಅಪಭ್ರಂಶ ನಡೆದಿದೆ. ಅತ್ಯಾಚಾರ ಪ್ರಕರಣದಲ್ಲಿ ಇಬ್ಬರು ಅಮಾಯಕರು 13 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದು, ಈಗ ಸಾಕ್ಷ್ಯಾಧಾರಗಳ ಕೊರತೆಯಿಂದ ಕೋರ್ಟ್ ಅವರನ್ನು ಬಿಡುಗಡೆ ಮಾಡಲು ಸೂಚಿಸಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಸರ್ಕಾರಕ್ಕೆ ಇದೇ ವೇಳೆ ತಾಕೀತು ಮಾಡಿ, ಛೀಮಾರಿ ಕೂಡ ಹಾಕಿದೆ.
ಗುಜರಾತ್ನ ಅಮ್ರೇಲಿಯ ಇಬ್ಬರು ವ್ಯಕ್ತಿಗಳನ್ನು ರೇಪ್ ಕೇಸ್ನಲ್ಲಿ ಬರೋಬ್ಬರಿ 13 ವರ್ಷ ಜೈಲಿಗಟ್ಟಲಾಗಿದೆ. ಶಿಕ್ಷೆಗೆ ಗುರಿಯಾದವರ ಮೇಲ್ಮನವಿ ಆಲಿಸಿದ ಕೋರ್ಟ್, ಸರಿಯಾದ ತನಿಖೆ ನಡೆಸದೇ ಅನುಮಾನದ ಮೇಲೆ ಇಬ್ಬರು ಬಂಧಿಸಿ ಜೈಲು ಶಿಕ್ಷೆ ವಿಧಿಸಿದ್ದನ್ನು ತರಾಟೆಗೆ ತೆಗೆದುಕೊಂಡಿದೆ. ಅಪರಾಧಿಗಳಲ್ಲದವರನ್ನು ಶಿಕ್ಷೆಗೆ ಒಳಪಡಿಸಿದ್ದು ತಪ್ಪು. ಕೂಡಲೇ ಅವರನ್ನು ಬಂಧನದಿಂದ ಮುಕ್ತಗೊಳಿಸಿ ದಾಖಲೆಗಳನ್ನು ಸಲ್ಲಿಸಲು ಸರ್ಕಾರಕ್ಕೆ ಆದೇಶಿಸಿತು.
ಪ್ರಕರಣವೇನು?:2009 ರಲ್ಲಿ ಅಮ್ರೇಲಿಯಲ್ಲಿ ನಡೆದಿದ್ದ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಅನುಮಾದನ ಮೇಲೆ ಬಂಧನಕ್ಕೆ ಒಳಪಡಿಸಿದ್ದರು. ಗೋವಿಂದಭಾಯಿ ಮತ್ತು ಗೋಪಾಲಭಾಯ್ ಎಂಬ ಇಬ್ಬರಿಗೆ ವಿಚಾರಣಾ ನ್ಯಾಯಾಲಯವು ಶಂಕೆಯ ಆಧಾರದ ಮೇಲೆ ಶಿಕ್ಷೆಯನ್ನು ವಿಧಿಸಿತ್ತು.
ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಇಬ್ಬರಿಗೂ ಶಿಕ್ಷೆ ವಿಧಿಸಿದ್ದಕ್ಕೆ ಯಾವುದೇ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಪ್ರಮಾಣೀಕರಿಸಿರಲಿಲ್ಲ. ಸಾಕ್ಷ್ಯಾಧಾರಗಳ ಪರಿಶೀಲನೆಯಲ್ಲಿಯೇ ಕೋರ್ಟ್ ಇಷ್ಟು ವರ್ಷಗಳನ್ನು ಕಳೆದಿದೆ. ಸೂಕ್ತ ಸಾಕ್ಷಿಗಳಿಲ್ಲದೇ ಯಾರನ್ನೂ ಶಿಕ್ಷೆಗೆ ಒಳಪಡಿಸಬಾರದು. ಆದರೆ, ವಿಚಾರಣಾ ಕೋರ್ಟ್ ಇದರಲ್ಲಿ ಯಡವಟ್ಟು ಮಾಡಿಕೊಂಡು ನಿರಾಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿತ್ತು.