ಅಹಮದಾಬಾದ್ (ಗುಜರಾತ್): ಮೋದಿ ಉಪನಾಮದ ಬಗ್ಗೆ ವಿವಾದಿತ ಹೇಳಿಕೆ ವಿಚಾರವಾಗಿ ಸಲ್ಲಿಸಲಾಗಿದ್ದ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಧ್ಯಂತರ ಪರಿಹಾರ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ. ಎರಡು ವರ್ಷದ ಜೈಲು ಶಿಕ್ಷೆ ವಿಧಿಸಿರುವ ಸೂರತ್ ಕೋರ್ಟ್ ಆದೇಶಕ್ಕೆ ತಡೆ ಕೋರಿ ರಾಹುಲ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ. ಬೇಸಿಗೆ ರಜೆಯ ನಂತರ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಈ ಪ್ರಕರಣದ ತೀರ್ಪು ಪ್ರಕಟಿಸಲಿದ್ದಾರೆ.
ಇದನ್ನೂ ಓದಿ:ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ ಪರವಾಗಿ ಮಂಡಿಸಿದ ಅಂಶಗಳ ಪಟ್ಟಿ..
2019ರ ಏಪ್ರಿಲ್ 13ರಂದು ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಎಲ್ಲ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮವನ್ನು ಹೊಂದಿದ್ದು ಹೇಗೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಈ ಬಗ್ಗೆ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೇ ಮಾರ್ಚ್ 23ರಂದು ಸೂರತ್ ವಿಚಾರಣಾ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ ಸೆಕ್ಷನ್ 499 ಮತ್ತು 500ರಡಿಯಲ್ಲಿ ರಾಹುಲ್ ಗಾಂಧಿ ಅಪರಾಧಿ ಎಂದು ಘೋಷಿಸಿ, ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ನಂತರ ಈ ಆದೇಶ ಪ್ರಶ್ನಿಸಿ ಏಪ್ರಿಲ್ 3ರಂದು ರಾಹುಲ್ ಗಾಂಧಿ ಸೂರತ್ ಸೆಷನ್ ನ್ಯಾಯಾಲಯ ಮೊರೆ ಹೋಗಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಒಂದು ಅರ್ಜಿ ಜಾಮೀನಿಗಾಗಿ ಮತ್ತು ಇನ್ನೊಂದು ಅರ್ಜಿಯಲ್ಲಿ ತಮ್ಮ ಮೇಲೆ ಬಾಕಿ ಉಳಿದಿರುವ ಅಪರಾಧದ ತಡೆ ಕೋರಿದ್ದರು. ಸೆಷನ್ ನ್ಯಾಯಾಲಯವು ರಾಹುಲ್ ಗಾಂಧಿಗೆ ಜಾಮೀನು ಮಂಜೂರು ಮಾಡಿದರೂ, ಶಿಕ್ಷೆಗೆ ತಡೆಯಾಜ್ಞೆ ನೀಡುವ ಮನವಿ ಅದು ತಿರಸ್ಕರಿಸಿತ್ತು.
ಹೀಗಾಗಿ ಕಾಂಗ್ರೆಸ್ ನಾಯಕ ರಾಹುಲ್, ಗುಜರಾತ್ ಹೈಕೋರ್ಟ್ನಲ್ಲಿ ತಮ್ಮ ವಿರುದ್ಧದ ಶಿಕ್ಷೆಗೆ ತಡೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ. ಕಳೆದ ಬುಧವಾರ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಗೀತಾ ಗೋಪಿ ಅವರ ಮುಂದೆ ಈ ಪ್ರಕರಣವನ್ನು ತುರ್ತು ವಿಚಾರಣೆಗಾಗಿ ಅರ್ಜಿ ಬಂದಿತ್ತು. ಆದರೆ, ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು. ನಂತರ ಈ ಪ್ರಕರಣವನ್ನು ನ್ಯಾಯಮೂರ್ತಿ ಹೇಮಂತ್ ಪ್ರಚ್ಛಕ್ ಅವರಿಗೆ ವಹಿಸಲಾಗಿದೆ.
ಮೇ 8ರಿಂದ ಜೂನ್ 3ರವರೆಗೆ ರಜೆ: ಏಪ್ರಿಲ್ 29ರಂದು ನ್ಯಾಯಮೂರ್ತಿ ಹೇಮಂತ್ ಪ್ರಚ್ಛಕ್ ಅರ್ಜಿ ವಿಚಾರಣೆ ನಡೆಸಿ, ಇಂದಿಗೆ ಮುಂದೂಡಿಕೆ ಮಾಡಿದ್ದರು. ರಾಹುಲ್ ಗಾಂಧಿ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ವಿಷಯದಲ್ಲಿ ಎರಡೂ ಕಡೆಯ ವಾದಗಳು ಮುಕ್ತಾಯವಾಗಿದ್ದು, ಮಧ್ಯಂತರ ಅಥವಾ ಅಂತಿಮ ಆದೇಶ ತುರ್ತಾಗಿ ನೀಡಬೇಕೆಂದು ನ್ಯಾಯ ಪೀಠವನ್ನು ಕೋರಿದರು. ಆದಾಗ್ಯೂ, ಈ ಹಂತದಲ್ಲಿ ಯಾವುದೇ ಮಧ್ಯಂತರ ರಕ್ಷಣೆ ನೀಡಲಾಗುವುದಿಲ್ಲ ಎಂದು ನ್ಯಾ. ಹೇಮಂತ್ ಪ್ರಚ್ಚಕ್ ಹೇಳಿದರು.
ಅಲ್ಲದೇ, ದಾಖಲೆಗಳು ಮತ್ತು ಪ್ರಕ್ರಿಯೆಗಳನ್ನು ಪರಿಶೀಲಿಸಿದ ನಂತರವೇ ಅಂತಿಮ ಆದೇಶವನ್ನು ನೀಡುವುದಾಗಿ ನ್ಯಾಯಮೂರ್ತಿ ಹೇಳಿದರು. ಜೊತೆಗೆ ಮೇ 8ರಿಂದ ಜೂನ್ 3 ರವರೆಗೆ ಇರುವ ಬೇಸಿಗೆ ರಜೆಯ ನಂತರದ ಹೈಕೋರ್ಟ್ ಮತ್ತೆ ಆರಂಭವಾದ ಬಳಿಕ ತೀರ್ಪಿನ ವಿಷಯವನ್ನು ಮುಂದೂಡಿಕೆ ಮಾಡುವುದಾಗಿ ತಿಳಿಸಿದರು. ಇದೇ ವೇಳೆ ಪ್ರಕರಣದ ಮೂಲ ದೂರುದಾರ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಪರವಾಗಿ ಹಾಜರಾದ ವಕೀಲ ನಿರುಪಮ್ ನಾನಾವತಿ ಅವರು, ಮಧ್ಯಂತರ ಪರಿಹಾರಕ್ಕಾಗಿ ರಾಹುಲ್ ಪರ ಸಿಂಘ್ವಿ ಮಾಡಿದ ಮನವಿಗೆ ವಿರೋಧ ವ್ಯಕ್ತಪಡಿಸಿದರು. ಇನ್ನು, ಈ ಪ್ರಕರಣದಲ್ಲಿ ಎರಡು ವರ್ಷದ ಜೈಲು ಶಿಕ್ಷೆಗೆ ಗುರಿಯಾದ ನಂತರ ವಯನಾಡು ಲೋಕಸಭಾ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ.
ಇದನ್ನೂ ಓದಿ:ಮೋದಿ ಜೀ ಭಾಷಣದಲ್ಲಿ ನಿಮ್ಮ ಬಗ್ಗೆ ಹೇಳಬೇಡಿ, ಜನರ ಬಗ್ಗೆ ಮಾತನಾಡಿ: ರಾಹುಲ್ ಗಾಂಧಿ