ಅಹಮದಾಬಾದ್: ದೇಶವನ್ನು ಬೆಚ್ಚಿಬೀಳಿಸಿದ ಮೊರ್ಬಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ. ಗುಜರಾತ್ನ ಅಹಮದಾಬಾದ್ನ ಮೊರ್ಬಿ ಸೇತುವೆ ಕುಸಿತದಿಂದಾಗಿ 135 ಜನರು ಪ್ರಾಣ ಕಳೆದುಕೊಂಡಿದ್ದರು. ಅಲ್ಲದೇ ಘಟನೆಯಿಂದಾಗಿ 56 ಮಂದಿ ಗಾಯಗೊಂಡಿದ್ದರು. ಮೊರ್ಬಿ ಪ್ರದೇಶದಲ್ಲಿ ಮಾತ್ರವಲ್ಲದೇ, ಇಡೀ ಗುಜರಾತ್ ಈ ಘಟನೆಯಿಂದ ಮರ ಮರುಗಿತ್ತು.
ಘಟನೆ ಸಂಬಂಧ ಒರೆವಾ ಗ್ರೂಪ್ನ ಇಬ್ಬರು ಮ್ಯಾನೇಜರ್ಗಳಾದ ದಿನೇಶ್ ದಾವೆ ಮತ್ತು ದೀಪಕ್ ಪರೇಖ್ ಸೇರಿದಂತೆ ಒಟ್ಟು 7 ಮಂದಿ ಈ ಪ್ರಕರಣದ ಆರೋಪಿಗಳಾಗಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ತಮಗೆ ಜಾಮೀನು ನೀಡುವಂತೆ ಕೋರಿ ಆರೋಪಿಹಳೆಲ್ಲರೂ ಗುಜರಾತ್ ಹೈಕೋರ್ಟ್ನ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಜಾಮೀನು ನೀಡಲು ನಿರಾಕರಿಸಿದೆ. ಇಂತಹ ಗಂಭೀರ ಅಪರಾಧ ಮಾಡಿದ ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಗುಜರಾತ್ ಉಚ್ಛ ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.
7 ಆರೋಪಿಗಳ ಬಂಧನ: ಒರೆವಾ ಗ್ರೂಪ್ನ ಇಬ್ಬರು ಮ್ಯಾನೇಜರ್ ಗಳಾದ ದಿನೇಶ್ ದಾವೆ, ದೀಪಕ್ ಪರೇಕ್, ಜೊತೆಗೆ ಟಿಕೆಟ್ ಬುಕ್ಕಿಂಗ್ ಕ್ಲರ್ಕ್ ಮತ್ತು ಸೆಕ್ಯೂರಿಟಿ ಗಾರ್ಡ್ ಮನ್ಸುಕ್ ತೊಪಿಯಾ, ಮಹದೇವ್ ಸೊಳಂಕಿ, ಅಲ್ಪೇಶ್ ಗೊಹ್ಲಿ, ದೀಲಿಪ್, ಮುಕೇಶ್ ಚೌಹಣ್ ಜಾಮೀನು ಕೋರಿ ಗುಜರಾತ್ನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಆರೋಪಿಗಳು ಜಾಮೀನು ಕೋರಿ ಮೊರ್ಬಿ ಸೆಷನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಲ್ಲಿ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಆರೋಪಿಗಳು ಗುಜರಾತ್ನ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.