ಅಹಮದಾಬಾದ್ (ಗುಜರಾತ್):2002ರ ಗೋಧ್ರಾ ನಂತರದ ಗಲಭೆ ಪ್ರಕರಣಗಳಲ್ಲಿ ಅಮಾಯಕರನ್ನು ಸಿಲುಕಿಸಲು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಜಾಮೀನು ಅರ್ಜಿಯನ್ನು ಶನಿವಾರ ಗುಜರಾತ್ ಹೈಕೋರ್ಟ್ ತಿರಸ್ಕರಿಸಿದ್ದು, ಕೂಡಲೇ ಶರಣಾಗುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಜಾಮೀನಿನ ಮೇಲೆ ಅರ್ಜಿದಾರರು ಹೊರಗಿರುವುದರಿಂದ ತಕ್ಷಣವೇ ಶರಣಾಗುವಂತೆ ಸೂಚಿಸಲಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಕಳೆದ ವರ್ಷ ಜೂನ್ 25ರಂದು ಗುಜರಾತ್‌ನ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್‌ಬಿ ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಹಾಗೂ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು. ಮುಂಬೈನಲ್ಲಿ ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದರು. ಜುಲೈ 30ರಂದು ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯವು ತೀಸ್ತಾ ಮತ್ತು ಶ್ರೀಕುಮಾರ್ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು.
ಇದನ್ನೂ ಓದಿ:ತೀಸ್ತಾ ಸೆಟಲ್ವಾಟ್ರನ್ನು ವಶಕ್ಕೆ ಪಡೆದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ
ಬಳಿಕ ಆಗಸ್ಟ್ 3ರಂದು ತೀಸ್ತಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಈ ಅರ್ಜಿಯ ಕುರಿತು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಏತನ್ಮಧ್ಯೆ ಹೈಕೋರ್ಟ್ ತನ್ನ ಮನವಿಯನ್ನು ಪರಿಗಣಿಸಲು ನಿರಾಕರಿಸಿದ ನಂತರ ತೀಸ್ತಾ ಮಧ್ಯಂತರ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸೆಪ್ಟೆಂಬರ್ 2ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇದೇ ವೇಳೆ, ಗುಜರಾತ್ ಹೈಕೋರ್ಟ್ ತೀಸ್ತಾ ಜಾಮೀನು ಅರ್ಜಿಯನ್ನು ನಿರ್ಧರಿಸುವವರೆಗೆ ಪಾಸ್‌ಪೋರ್ಟ್ ಅನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸೆಪ್ಟೆಂಬರ್ 3ರಂದು ಸಬರಮತಿ ಜೈಲಿನಿಂದ ಬಿಡುಗಡೆಗೊಂಡ ತೀಸ್ತಾ ಸದ್ಯ ಹೊರಗಡೆ ಇದ್ದಾರೆ.