ಗಾಂಧಿನಗರ (ಗುಜರಾತ್): 2013ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಗುಜರಾತ್ನ ಗಾಂಧಿನಗರದ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ, ಈ ಪ್ರಕರಣದ ಸಂತ್ರಸ್ತರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
2013ರ ಆಗಸ್ಟ್ 15ರ ರಾತ್ರಿ ಜೋಧ್‌ಪುರ ಸಮೀಪದ ಮನೈ ಪ್ರದೇಶದಲ್ಲಿ ತಮ್ಮ ಆಶ್ರಮದಲ್ಲಿ ಅಪ್ರಾಪ್ತೆಯ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಈಗಾಗಲೇ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಇದೇ 2013ರಲ್ಲಿ ಅಸಾರಾಂ ಬಾಪುವಿನ ಮೇಲೆ ಮಾಜಿ ಮಾಹಿಳಾ ಶಿಷ್ಯೆ ಕೂಡ ಅತ್ಯಾಚಾರ ಆರೋಪ ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣದಲ್ಲೂ ಅಸಾರಾಂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸೋಮವಾರಷ್ಟೇ ಈ ಪ್ರಕರಣದಲ್ಲಿ ಅಸಾರಾಂ ಅವರನ್ನು ಕೋರ್ಟ್ ದೋಷಿ ಎಂದು ಪ್ರಕಟಿಸಿತ್ತು.
ಪ್ರಕರಣದ ಹಿನ್ನೆಲೆ:81 ವರ್ಷದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಈಗಾಗಲೇ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೋಧ್‌ಪುರ ಜೈಲಿನಲ್ಲಿದ್ದಾನೆ. 2001ರಿಂದ 2006ರ ನಡುವೆ ಗುಜರಾತ್ನ ಅಹಮದಾಬಾದ್ ಬಳಿಯ ಮೊಟೆರಾದಲ್ಲಿರುವ ಅಸಾರಾಂ ಬಾಪು ಆಶ್ರಮದಲ್ಲಿ ವಾಸಿಸುತ್ತಿದ್ದ ಸೂರತ್ ಮೂಲದ ಶಿಷ್ಯೆಯ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ ಆರೋಪವು ಅಸಾರಾಂ ಮೇಲಿತ್ತು. ಈ ಕುರಿತಂತೆ 2013ರಲ್ಲಿ ಶಿಷ್ಯೆ ಅತ್ಯಾಚಾರ ಮತ್ತು ಅಕ್ರಮ ಬಂಧನದ ಕೇಸ್ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಗುಜರಾತ್ನ ಗಾಂಧಿನಗರದ ಸೆಷನ್ಸ್ ಕೋರ್ಟ್ ಸೋಮವಾರ ಅಸಾರಾಂನನ್ನು ದೋಷಿ ಎಂದು ತೀರ್ಪು ನೀಡಿತ್ತು. ಇಂದು ನ್ಯಾಯಾಧೀಶ ಡಿ.ಕೆ.ಸೋನಿ ಅವರು ಶಿಕ್ಷೆಯ ಪ್ರಮಾಣದ ಬಗ್ಗೆ ವಾದ ಆಲಿಸಿದ ನಂತರ ಜೀವಾವಧಿ ಶಿಕ್ಷೆ ವಿಧಿಸುವ ತೀರ್ಪು ಪ್ರಕಟಿಸಿದರು.