ಗಾಂಧಿನಗರ :ಗುಜರಾತ್ನ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟು ಸತತ ಮೂರನೇ ದಿನವೂ ಉಕ್ಕಿ ಹರಿಯುತ್ತಿದೆ. ಇಂದು ಬೆಳಗ್ಗೆ ವೇಳೆಗೆ ಅಣೆಕಟ್ಟಿಗೆ 5.19 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಇತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ. ಒಳಹರಿವಿಗೆ ಪ್ರತಿಕ್ರಿಯೆಯಾಗಿ 3.43 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೆ ಕೃಷಿ ನೀರಾವರಿ ಅಗತ್ಯಗಳನ್ನು ಪೂರೈಸಲು ಹೆಚ್ಚುವರಿ 18,593 ಕ್ಯೂಸೆಕ್ ನೀರನ್ನು ನರ್ಮದಾ ಮುಖ್ಯ ಕಾಲುವೆ ವ್ಯವಸ್ಥೆಗೆ ಹರಿಸಲಾಗಿದೆ.
ಗುಜರಾತ್ನ ಹಲವೆಡೆ ಪ್ರವಾಹ ಪರಿಸ್ಥಿತಿ ಇನ್ನೂ ಗಂಭೀರವಾಗಿ ಮುಂದುವರೆದಿದೆ. ಜುನಾಗಢ ಜಿಲ್ಲೆಯ ಆಖಾ ಗ್ರಾಮದಲ್ಲಿ ಅತ್ಯಂತ ಧೈರ್ಯದಿಂದ ಕಾರ್ಯಾಚರಣೆ ನಡೆಸಿದ ಎನ್ಡಿಆರ್ಎಫ್ ವಿವಿಧ ಸ್ಥಳಗಳಲ್ಲಿ ಸಿಲುಕಿದ್ದ ಹಿರಿಯ ನಾಗರಿಕರು ಮತ್ತು ಇತರ ನಾಲ್ವರು ಗ್ರಾಮಸ್ಥರನ್ನು ಸುರಕ್ಷಿತವಾಗಿ ಕರೆತಂದಿದೆ.
ಸೆಪ್ಟೆಂಬರ್ 18 ರಂದು ಎನ್ಡಿಆರ್ಎಫ್ ಗುಜರಾತ್ನ ಅರಾವಳಿ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ಸಿಲುಕಿದ್ದ ಒಟ್ಟು 157 ಜನರನ್ನು ರಕ್ಷಿಸಿತ್ತು. ಲಕ್ಷೇಶ್ವರಿ ಗ್ರಾಮದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿರುವ ಎನ್ಡಿಆರ್ಎಫ್ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಏತನ್ಮಧ್ಯೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಧಾರಾಕಾರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿನ ಜಿಲ್ಲಾಧಿಕಾರಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದು, ಪರಿಹಾರ ಕಾರ್ಯಾಚರಣೆಗಳ ಬಗ್ಗೆ ನಿಗಾ ವಹಿಸಿದ್ದಾರೆ.