ಸೂರತ್(ಗುಜರಾತ್):ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಎಎಪಿ ಪಕ್ಷಗಳು ಈ ಬಾರಿ ರಣಕಣದಲ್ಲಿವೆ. ಮತ್ತೆ ಅಧಿಕಾರಕ್ಕೆ ಬಂದು ಗೆಲುವಿನ ದಾಖಲೆ ಮಾಡಲು ಬಿಜೆಪಿ ತಂತ್ರ ಹೂಡಿದ್ದರೆ, ರಾಜ್ಯದಲ್ಲಿ ಚಿಗುರುತ್ತಿರುವ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಈ ಮಧ್ಯೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕಮಾಲ್ ಮಾಡಲು ಕಣಕ್ಕಿಳಿದಿದೆ.
ಚುನಾವಣೆಯಲ್ಲಿ ಪಕ್ಷದ ಗೆಲುವು ಎಷ್ಟು ಮುಖ್ಯವೋ, ಅಷ್ಟೇ ಪ್ರತಿ ಅಭ್ಯರ್ಥಿಗಳ ಗೆಲುವೂ ಪ್ರಮುಖವೇ. ಇದರಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಎಲ್ಲ ಪಕ್ಷಗಳು ಮಣೆ ಹಾಕುತ್ತವೆ. ಕೆಲವೊಮ್ಮೆ ಎಲ್ಲ ಪಕ್ಷಗಳು ಅನಿವಾರ್ಯವಾಗಿ ಒತ್ತಡ, ಪ್ರಭಾವ ಮತ್ತು ಜಾತಿ ಆಧಾರದ ಮೇಲೆ ಸೋತ ಅಭ್ಯರ್ಥಿಗೆ ಮತ್ತೆ ಮಣೆ ಹಾಕುತ್ತವೆ. ಇದರಲ್ಲಿ ಕಾಂಗ್ರೆಸ್ ಮುಂದಿದ್ದರೆ, ಬಿಜೆಪಿ ಕೂಡ ಇದೇ ಹಾದಿಯಲ್ಲಿದೆ.
1995 ರಿಂದ ಸೋತ ಅಭ್ಯರ್ಥಿಗೆ ಕಾಂಗ್ರೆಸ್ ಈ ಬಾರಿ ಮಣೆ ಹಾಕಿರುವುದು ಕಾರ್ಯಕರ್ತರು ಮತ್ತು ಮತದಾರರಿಗೆ ಅಚ್ಚರಿ ಉಂಟು ಮಾಡಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಧನ್ಸುಖ್ ರಜಪೂತ್ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸೋತು ಭಾರೀ ಮುಖಭಂಗ ಅನುಭವಿಸಿದ್ದರು. ಈ ಬಾರಿಯ ಕದನಕ್ಕೂ ಪಕ್ಷ ಅವರನ್ನೇ ಕಣಕ್ಕಿಳಿಸಿದೆ. ಸೋತಿರುವ ಧನ್‌ಸುಖ್ ರಜಪೂತ್ ಕಣಕ್ಕಿಳಿದಿರುವುದು ಸಾರ್ವಜನಿಕರು ಮತ್ತು ಕಾರ್ಯಕರ್ತರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಕಠಿಣ ಸ್ಪರ್ಧೆ ಎದುರಿಸುತ್ತಿರುವ ರಾಜ್ಯದಲ್ಲಿ ಕಾಂಗ್ರೆಸ್ನ ಈ ನಡೆ ಅಚ್ಚರಿಗೆ ಕಾರಣವಾಗಿದೆ. ಇದು ಪಕ್ಷ ಅವರ ಮೇಲೆ ವಿಶ್ವಾಸ ಇರಿಸಿರುವ ದ್ಯೋತಕವಾಗಿದೆ. ರಜಪೂತ್ ಕೂಡ ಪಕ್ಷಕ್ಕೆ ನಿಷ್ಟರಾಗಿರುವುದು ಟಿಕೆಟ್ ಒಲಿದು ಬರಲು ಕಾರಣವಾಗಿದೆ. ಇದರಲ್ಲಿ ಬಿಜೆಪಿ, ಎಎಪಿ ಕೂಡ ಹಿಂದೆ ಬಿದ್ದಿಲ್ಲ ಎಂದೇ ಹೇಳಬಹುದು.
16 ಸೋತ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್:ಹಾಲಿ ಸಚಿವರು, ಹಿರಿಯರಿಗೆ ಟಿಕೆಟ್ ನಿರಾಕರಿಸಿ ಸಂಚಲನ ಮೂಡಿಸಿರುವ ಗುಜರಾತ್ ಬಿಜೆಪಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಲು ರಣತಂತ್ರ ರೂಪಿಸಿದೆ. ಅದರಲ್ಲೂ ದಾಖಲೆಯ ಗೆಲುವಿನ ಮೇಲೆ ಕಣ್ಣಿಟ್ಟಿರುವ ಪಕ್ಷ ಶತಾಯಗತಾಯ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಅದರಲ್ಲಿ 16 ಅಭ್ಯರ್ಥಿಗಳು ಈ ಹಿಂದೆ ಹಲವು ಚುನಾವಣೆಗಳಲ್ಲಿ ಸೋತರೂ ಈ ಬಾರಿ ಚುನಾವಣಾ ಕದನಕ್ಕೆ ಇಳಿಸಿದೆ.