ಅಹಮದಾಬಾದ್(ಗುಜರಾತ್): ಮಹಾಸಾಗರ್ ಜಿಲ್ಲೆಯ ಬಾಲಸಿನೋರ್‌ನ ಕೆಎಂಜಿ ಆಸ್ಪತ್ರೆಯಲ್ಲಿ ರೋಗಿಗೆ ಕಿಡ್ನಿಯಲ್ಲಿ ಕಲ್ಲು ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದಿದ್ದ ಪ್ರಕರಣದಲ್ಲಿ ಮೃತಪಟ್ಟ ರೋಗಿಯ ಸಂಬಂಧಿಕರಿಗೆ 11.23 ಲಕ್ಷ ಪರಿಹಾರ ನೀಡುವಂತೆ ಗುಜರಾತ್ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ನಾಡಿಯಾಡ್ ನಿವಾಸಿ ದೇವೇಂದ್ರ ಭಾಯಿ ರಾವಲ್ ಅವರು 2011 ರಲ್ಲಿ ತನ್ನ ಮೂತ್ರಪಿಂಡದ ಕಲ್ಲು ತೆಗೆಯಲು ಮಹಾಸಾಗರ್ ಜಿಲ್ಲೆಯ ಬಾಲಸಿನೋರ್‌ನ ಕೆಎಂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಚಿಕಿತ್ಸೆ ವೇಳೆ ಮೂತ್ರಪಿಂಡದಲ್ಲಿ ಕಲ್ಲು ತೆಗೆಯುವ ಬದಲು ಮೂತ್ರಪಿಂಡವನ್ನೇ ತೆಗೆದು ಎಡವಟ್ಟು ಮಾಡಿದ್ದರು.
ನೇರವಾಗಿ ಅಥವಾ ಪರೋಕ್ಷವಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಹೊಣೆಗಾರರಾಗಿರುವ ಆಸ್ಪತ್ರೆಯು ಪರಿಹಾರವನ್ನು ಪಾವತಿಸುವಂತೆ ಗುಜರಾತ್ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ. ರಾವಲ್ ತನ್ನ ಮೂತ್ರಪಿಂಡದ ಕಲ್ಲು ತೆಗೆಯಲು ಒಪ್ಪಿಗೆ ನೀಡಿದ್ದರೆ, ವೈದ್ಯರು ಆತನ ಮೂತ್ರಪಿಂಡವನ್ನು ತೆಗೆದಿದ್ದರು. ಪರಿಣಾಮ 4 ತಿಂಗಳ ಬಳಿಕ ಆತ ಮೃತಪಟ್ಟಿದ್ದ. ಮೃತನ ಸಂಬಂಧಿಕರು ಆಸ್ಪತ್ರೆಯ ನಿರ್ಲಕ್ಷ್ಯದ ಆರೋಪದ ಮೇಲೆ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು.
ಆಯೋಗವು ಆಸ್ಪತ್ರೆಯ ಹಾಗೂ ಅಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಾವಲ್ ಮೃತಪಟ್ಟಿದ್ದಾರೆ ಎಂದು ಹೇಳಿದ್ದು, 2012 ರಿಂದ ಪರಿಹಾರವನ್ನು ಶೇ. 7.5ರ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಿದೆ.
ಆಸ್ಪತ್ರೆಯು ಒಳಾಂಗಣ ಮತ್ತು ಹೊರಾಂಗಣ ಪರೀಕ್ಷೆಗಳಿಗೆ ವಿಮಾ ಪಾಲಿಸಿಯನ್ನು ಹೊಂದಿದೆ ಎಂದು ಆಯೋಗವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಆದರೆ ಸಲಹಾ ವೈದ್ಯರು ಮಾಡಿದ ವೈದ್ಯಕೀಯ ನಿರ್ಲಕ್ಷ್ಯಕ್ಕೆ ವಿಮಾ ಕಂಪನಿಯು ಜವಾಬ್ದಾರನಾಗಿರುವುದಿಲ್ಲ. ದೇವೇಂದ್ರ ಅವರ ಸ್ಥಿತಿ ಹದಗೆಟ್ಟ ನಂತರ ಇನ್ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸ್ ಆ್ಯಂಡ್ ರಿಸರ್ಚ್ ಸೆಂಟರ್ (ಐಕೆಡಿಆರ್ಸಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ 2012ರ ಜನವರಿ 8 ರಂದು ರೋಗಿ ಮೃತಪಟ್ಟಿದ್ದ.