ಸೂರತ್ : ಗುಜರಾತ್‌ನ ಸೂರತ್‌ನಲ್ಲಿರುವ ದೇಸಾಯಿ ಕುಟುಂಬವೊಂದು ಎರಡನೇ ಮಹಾಯುದ್ಧದ ಕಾಲದ 45 ವಿಂಟೇಜ್ ಬೈಕ್‌ಗಳ ಸಂಗ್ರಹವನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್‌ನಿಂದ ಹಿಡಿದು ಬುಲೆಟ್, ಲ್ಯಾಂಬ್ರೆಟ್ಟಾ, ಯೆಜ್ಡಿ ಮತ್ತು ಜಾವಾ ಎಂದು ಜನಪ್ರಿಯವಾಗಿರುವ ಇನ್ನೂ ಅನೇಕ ಬೈಕ್‌ಗಳ ಸಂಗ್ರಹವು ಕೃಪಲಾನಿ ದೇಸಾಯಿ ಅವರ ಪುತ್ರ ಸಿದ್ಧಾರ್ಥ್ ದೇಸಾಯಿ ಅವರ ಆಸ್ತಿಯಾಗಿದೆ.
ಹೌದು, ಮೂಲತಃ ಕೃಷಿ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದ್ದ ದೇಸಾಯಿ ಕುಟುಂಬಕ್ಕೆ ಹಳೆಯ ಬೈಕ್‌ಗಳ ಮೇಲಿನ ಉತ್ಸಾಹವು 1990 ರಲ್ಲಿ ಪ್ರಾರಂಭವಾಯಿತು. ವಿಂಟೇಜ್ ಮೋಟಾರ್ ಸೈಕಲ್‌ಗಳ ಮೇಲಿನ ಒಲವಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿನ ಸಿದ್ಧಾರ್ಥ್, " 1990 ರಲ್ಲಿ ನನ್ನ ತಂದೆ ವಿವಿಧ ನಗರಗಳಿಂದ ಬೈಕ್‌ಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ತಂದೆಯವರಿಗೆ ಬೈಕ್‌ಗಳೆಂದರೆ ತುಂಬಾ ಪ್ರೀತಿ. ಹೀಗಾಗಿ, ಅವರು ಹಳೆಯ ಬೈಕ್‌ಗಳನ್ನು ಖರೀದಿಸಲು ಮುಂದಾದರು. ತಂದೆಯವರ ಹವ್ಯಾಸವು ಕ್ರಮೇಣ ಉತ್ಸಾಹಕ್ಕೆ ತಿರುಗಿತು" ಎಂದರು.
ದೇಸಾಯಿ ಕುಟುಂಬದವರು ತಮ್ಮ ಮನೆಯ ಒಂದು ಭಾಗವನ್ನೇ ಬೈಕ್ ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ. ಜೊತೆಗೆ, ವಿಂಟೇಜ್ ಬೈಕ್‌ಗಳನ್ನು ನೋಡಿಕೊಳ್ಳಲು ಮೆಕ್ಯಾನಿಕ್ ಅನ್ನು ಸಹ ನಿಯೋಜಿಸಲಾಗಿದೆ. ಈ ಬೈಕ್‌ಗಳನ್ನು ತಿಂಗಳಿಗೆ ನಾಲ್ಕೈದು ಬಾರಿ ಸರ್ವಿಸ್ ಮಾಡಲಾಗುತ್ತದೆ. "ನಮ್ಮಲ್ಲಿ ಹಸ್ಕ್‌ವರ್ನಾ, ಬಿಎಸ್‌ಎ ಎಂ20, ನಾರ್ಟನ್ 16, ಟ್ರಯಂಫ್ ಟೈಗರ್ ಮತ್ತು ಇನ್ನೂ ಹಲವು ಹಳೆಯ ಬೈಕ್‌ಗಳಿವೆ. ಬಿಎಸ್‌ಎ ಎಂ20 ಅನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ ಬಳಸಲಾಗಿದೆ. ನಮ್ಮ ವಿಂಟೇಜ್ ಸಂಗ್ರಹವು 123 ವರ್ಷಗಳ ಹಿಂದಿನದು" ಎಂದು ಸಿದ್ಧಾರ್ಥ್ ಹೇಳಿದರು.