ಹೈದರಾಬಾದ್/ಗಾಂಧಿನಗರ:'ಅತಿ ತೀವ್ರ ಸ್ವರೂಪ ಚಂಡಮಾರುತ'ವಾಗಿ ಬದಲಾಗಿರುವ ಬಿಪೊರ್ಜೋಯ್ ಜೂನ್ 15 ರ ವೇಳೆಗೆ ಗುಜರಾತ್‌ನ ಸೌರಾಷ್ಟ್ರ ಮತ್ತು ಕಛ್ ಬಂದರಿಗೆ ಬಂದಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಪ್ರಭಾವದಿಂದ ಜುನಾಗಢ ಮತ್ತು ಗಿರ್ ಸೋಮನಾಥ್ ಜಿಲ್ಲೆಗಳಲ್ಲಿ ಸರಾಸರಿ ಎರಡೂವರೆ ಇಂಚಿನಷ್ಟು ಮಳೆ ಸುರಿದಿದೆ. ಮಹಾರಾಷ್ಟ್ರದಲ್ಲಿ ಎಚ್ಚರಿಕೆ ಮಧ್ಯೆಯೂ ಸಮುದ್ರಕ್ಕಿಳಿದಿದ್ದ ಐವರು ನೀರು ಪಾಲಾಗಿದ್ದು, ಇದರಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.
ಬಿಪೊರ್ಜೋಯ್ ಚಂಡಮಾರುತ ಅರೇಬಿಯನ್ ಸಮುದ್ರದಿಂದ ಮಧ್ಯರಾತ್ರಿ 2.30 ರ ವೇಳೆಗೆ ಪೋರಬಂದರ್‌ನಿಂದ ನೈಋತ್ಯಕ್ಕೆ 290 ಕಿಮೀ ಮತ್ತು ಜಖೌ ಬಂದರಿನ ನೈಋತ್ಯಕ್ಕೆ 360 ಕಿಮೀ ದೂರದಲ್ಲಿದೆ. ಭಾರತೀಯ ಹವಾಮಾನ ಇಲಾಖೆ ಹೊರಡಿಸಿದ ಆರೆಂಜ್ ಅಲರ್ಟ್ ಪ್ರಕಾರ, ಪ್ರಬಲ ಚಂಡಮಾರುತ ಸ್ವರೂಪ ಪಡೆದಿರುವ ಬಿಪೊರ್ಜೊಯ್ ನಾಡಿದ್ದು, ಗುಜರಾತ್ಗೆ ಅಪ್ಪಳಿಸಲಿದೆ. ವಿವಿಧೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕರಾವಳಿ ತೀರ ಜನರ ಸ್ಥಳಾಂತರ:ಗುಜರಾತ್‌ನ ಕಚ್, ಸೌರಾಷ್ಟ್ರ ಜಿಲ್ಲೆಗಳಲ್ಲಿ ಕರಾವಳಿಯಿಂದ 10 ಕಿ.ಮೀ ದೂರದಲ್ಲಿರುವ ಹಳ್ಳಿಗಳ ಜನರನ್ನು ಸ್ಥಳಾಂತರಿಸುವ ಕಾರ್ಯ ಪ್ರಾರಂಭವಾಗಿದೆ. ಚಂಡಮಾರುತದ ಹಾನಿಯನ್ನು ತಡೆಯಲು ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ. ಈ ಸೈಕ್ಲೋನ್ ಗಂಟೆಗೆ 150 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಜನರನ್ನು ಸ್ಥಳಾಂತರಿಸುವುದು ಮತ್ತು ಬಂದರು ಪ್ರದೇಶಗಳಲ್ಲಿ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಮುಖ್ಯ ಪ್ರಯತ್ನಗಳಾಗಿವೆ. ಇಲ್ಲಿಯವರೆಗೆ, ಕರಾವಳಿ ಪ್ರದೇಶಗಳ ತಗ್ಗು ಪ್ರದೇಶದಲ್ಲಿ ವಾಸಿಸುವ ಸುಮಾರು 7,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗುಜರಾತ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಡ್ಲಾ ಬಂದರು ಬಂದ್:ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಕಾಂಡ್ಲಾ ಬಂದರಿನಲ್ಲಿ ಹಡಗುಗಳ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಅಲ್ಲಿನ ಕಾರ್ಮಿಕರು ಸೇರಿದಂತೆ 3,000 ಜನರನ್ನು ಜಿಲ್ಲಾಡಳಿತ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದೆ. ಕಛ್ ಜಿಲ್ಲೆಯಲ್ಲಿರುವ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬಂದರಾದ ದೀನದಯಾಳ್ ಬಂದರಿನಲ್ಲಿ ಕೆಲಸವನ್ನು ಸ್ಥಗಿತಗೊಳಿಸಿಸಲಾಗಿದೆ.
ಸಿಗ್ನಲ್ 10 ಎಚ್ಚರಿಕೆಯ ದೃಷ್ಟಿಯಿಂದ ಬಂದರನ್ನು ಮುಚ್ಚಲಾಗಿದೆ. ಗುರುತಿಸಲಾದ ಪ್ರದೇಶದಲ್ಲಿ ಎಲ್ಲಾ ದೋಣಿಗಳು, ವಸ್ತುಗಳು ಮತ್ತು ಬಾರ್ಜ್‌ಗಳನ್ನು ಕಟ್ಟಿ ಹಾಕಲಾಗಿದೆ. 24x7 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿನ ಎಲ್ಲ ಕಾರ್ಮಿಕರು ಮತ್ತು ಮೀನುಗಾರರನ್ನು ಸ್ಥಳಾಂತರಿಸಲಾಗಿದೆ ಎಂದು ದೀನದಯಾಳ್ ಬಂದರು ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.