ಅಹಮದಾಬಾದ್ (ಗುಜರಾತ್):2002ರ ಗುಜರಾತ್ ಗಲಭೆಯ ಕುರಿತು ಪೊಲೀಸರಿಗೆ ಆಧಾರರಹಿತ ಮಾಹಿತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಜಿಒ ಮುಖ್ಯಸ್ಥೆ ತೀಸ್ತಾ ಸೆಟಲ್ವಾಡ್ರನ್ನು ವಶಪಡಿಸಿಕೊಂಡಿದ್ದ ಒಂದು ದಿನದ ನಂತರ, ಗುಜರಾತ್ ಪೊಲೀಸ್ ಕ್ರೈಂ ಬ್ರಾಂಚ್ ಇಂದು ತೀಸ್ತಾ ಅವರನ್ನು ಬಂಧಿಸಿದೆ. ಆದಾಗ್ಯೂ, ತನ್ನ ವಿರುದ್ಧದ ಆರೋಪಗಳನ್ನು ಅವರು ಕಟುವಾಗಿ ತಿರಸ್ಕರಿಸಿದ್ದಾರೆ.
ಇವರನ್ನು ಪೊಲೀಸರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಪದೇ ಪದೇ ಪತ್ರಕರ್ತರಿಗೆ "ನಾನು ಅಪರಾಧಿ ಅಲ್ಲ. ನಾನು ಅಪರಾಧಿ ಅಲ್ಲ" ಎಂದು ಕೂಗಿ ಕೂಗಿ ಹೇಳುತ್ತಿದ್ದರು. ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಗುಜರಾತ್ ಪೊಲೀಸರು 14 ದಿನಗಳ ಕಸ್ಟಡಿಗೆ ಕೋರುವುದಾಗಿ ಇದೇ ವೇಳೇ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂದರ್ಶನವೊಂದರಲ್ಲಿ ಸೆಟಲ್ವಾಡ್ ನಡೆಸುತ್ತಿರುವ ಎನ್‌ಜಿಒ, 2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಆಧಾರರಹಿತ ಮಾಹಿತಿಯನ್ನು ನೀಡಿದೆ ಎಂದು ಹೇಳಿದ್ದರು. ಈ ಹೇಳಿಕೆ ಬಂದ ಕೆಲವು ದಿನಗಳ ನಂತರ ಈ ಬೆಳವಣಿಗೆಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿ ಆರ್.ಬಿ. ಶ್ರೀಕುಮಾರ್ ಅವರನ್ನು ನಿನ್ನೆ ಬಂಧಿಸಲಾಗಿದ್ದು, ಇಂದು ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಲಾಗಿದೆ. ನಾವು ಇಂದು ಈ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಚೈತನ್ಯ ಮಾಂಡ್ಲಿಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಮೃತಸರದ ಸಿಮ್ರಂಜಿತ್ ಸಿಂಗ್ ಮಾನ್ ಸಂಗ್ರೂರ್ ವಿಜಯಿ: ಪಂಜಾಬ್ ಉಪಚುನಾವಣೆಯಲ್ಲಿ ಎಎಪಿಗೆ ಭಾರಿ ಹಿನ್ನಡೆ