ಗಾಂಧಿನಗರ(ಗುಜರಾತ್):ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಆಪ್ ಪಕ್ಷಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿದ್ದು, ಮೂರು ಪಕ್ಷಗಳು ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ಘೋಷಿಸಿವೆ. ಆಪ್ ಪಕ್ಷ ಹಲವು ಉಚಿತ ಕೊಡುಗೆಗಳನ್ನು ಘೋಷಿಸಿದ ಬಳಿಕ ಬಿಜೆಪಿ ಕೂಡ ಇದೇ ಹಾದಿ ತುಳಿದಿದೆ.
ಮಹಿಳೆಯರಿಗೆ ಭರಪೂರ ಉಚಿತ ಯೋಜನೆ:ಆಮ್ ಆದ್ಮಿ ಪಕ್ಷ ಸರ್ಕಾರ ರಚನೆಯಾದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯ ಬಗ್ಗೆ ಘೋಷಿಸಿದೆ. ಇಂದಿರಾ ಪ್ರಿಯದರ್ಶಿನಿ ಪಾಸ್ ಯೋಜನೆಯಡಿ 8 ನಗರಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ಪ್ರಯಾಣ ಸೌಲಭ್ಯ ನೀಡಲಾಗಿದೆ.
ವಿಧವೆಯರು, ವಯೋವೃದ್ಧರು, ಒಂಟಿ ಮಹಿಳೆಯರು ಸೇರಿ ಎಲ್ಲ ನಿರ್ಗತಿಕ ಮಹಿಳೆಯರಿಗೆ ಮಾಸಿಕ 2 ಸಾವಿರ ರೂಪಾಯಿ ತುಟ್ಟಿಭತ್ಯೆ ನೀಡಲಾಗುವುದು ಎಂದು ಕಾಂಗ್ರೆಸ್ ಆಶ್ವಾಸನೆ ನೀಡಿದೆ. ಇನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಸಹೋದರಿಯರಿಗೆ ಇ-ಸ್ಕೂಟರ್, ವಾಲಿ ಧೋತಿ ಯೋಜನೆಯಡಿ 1.5 ಲಕ್ಷ ಸಹಾಯಧನ, ಹಿರಿಯ ನಾಗರಿಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವುದಾಗಿ ಘೋಷಿಸಿದೆ.
ವಿದ್ಯುತ್:ಆಮ್ ಆದ್ಮಿ ಪಕ್ಷ ಉಚಿತ ವಿದ್ಯುತ್ ದೆಹಲಿ ಮಾದರಿಯಲ್ಲಿ ಗುಜರಾತ್ನನಲ್ಲೂ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದೆ. ಇದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲೂ ಕಾಣಬಹುದು. ಬಿಜೆಪಿ ಉಚಿತ ವಿದ್ಯುತ್ ಭರವಸೆ ನೀಡಿಲ್ಲವಾದರೂ, ಪ್ರತಿ ಕುಟುಂಬಕ್ಕೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ರಾಜ್ಯದ ಪ್ರತಿಯೊಬ್ಬ ನಾಗರಿಕನ 300 ಯೂನಿಟ್ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ.
ಶಿಕ್ಷಣ:ಶಿಕ್ಷಣದ ಬಗ್ಗೆ ಬಿಜೆಪಿ ಭರಪೂರ ಆಶ್ವಾಸನೆ ನೀಡಿದೆ. ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಅಡಿ ಮುಂದಿನ 5 ವರ್ಷಗಳಲ್ಲಿ 10 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 20 ಸಾವಿರ ಶಾಲೆಗಳನ್ನು ಮೇಲ್ದರ್ಜೆಗೇರಲಿವೆ. 1 ಸಾವಿರ ಕೋಟಿ ರೂಪಾಯಿ 'ಕೇಶವರಾಂ ಕಾಶಿರಾಮ ಶಾಸ್ತ್ರಿ ಉನ್ನತ ಶಿಕ್ಷಣ ಪರಿವರ್ತನಾ ನಿಧಿ ರೂಪಿಸುತ್ತೇವೆ. ಹೊಸ ಸರ್ಕಾರಿ ಕಾಲೇಜುಗಳ ನಿರ್ಮಾಣ, ಅಸ್ತಿತ್ವದಲ್ಲಿರುವ ಕಾಲೇಜು-ವಿಶ್ವವಿದ್ಯಾಲಯಗಳ ಸುಧಾರಣೆಗೆ ಭರವಸೆ ನೀಡಿದೆ.
ಇನ್ನು ಕಾಂಗ್ರೆಸ್ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ಕೆಜಿಯಿಂದ ಪಿಜಿಯವರೆಗೆ ಸಂಪೂರ್ಣ ಶುಲ್ಕ ಮನ್ನಾ ಮಾಡುವುದಾಗಿ ಹೇಳಿದೆ. 3 ಸಾವಿರ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಗಳ ಆರಂಭ, ಶಿಕ್ಷಣ ಹಕ್ಕು ಕಾಯ್ದೆಯ ವ್ಯಾಪ್ತಿ ವಿಸ್ತರಣೆಯ ಭರವಸೆ ನೀಡಿದೆ.