ಅಹಮದಾಬಾದ್:ರಾಜಸ್ಥಾನದ ಜೈಪುರದಲ್ಲಿ 12 ಕೆಜಿ ಆರ್‌ಡಿಎಕ್ಸ್ ಪತ್ತೆಗೆ ಸಂಬಂಧಿಸಿದಂತೆ ಮುಂಬೈ ಮೂಲದ ಶಂಕಿತನನ್ನು ಬಂಧಿಸಲಾಗಿದೆ. ಬಂಧಿತ ಶಂಕಿತ ಅಕಿಫ್ ನಾಚ್ ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಬಾಂಬ್ ಸ್ಫೋಟಕ ತರಬೇತಿ ಪಡೆದಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಆರ್‌ಡಿಎಕ್ಸ್ ಮೂಲಕ ಆರೋಪಿಗಳು ರಾಜಸ್ಥಾನದಲ್ಲಿ ಬಾಂಬ್ ಸ್ಫೋಟಿಸಲು ಯೋಜಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಕೂಡಾ ಈಗಾಗಲೇ ಐವರು ಶಂಕಿತರನ್ನು ಬಂಧಿಸಿದ್ದಾರೆ.
ಈ ಸಂಚು ಬಯಲಾಗಿದ್ದು ಹೇಗೆ?:ರಾಜಸ್ಥಾನದ ನಿಂಬಹೆಡಾ ಪೊಲೀಸರು ಕಾರೊಂದನ್ನುತಪಾಸಣೆ ಮಾಡುತ್ತಿದ್ದ ವೇಳೆ ಸ್ಫೋಟದ ಸಂಚು ಬಯಲಾಗಿತ್ತು. ಈ ಸಂಬಂಧ ಪೊಲೀಸರು ರತ್ಲಾಮ್ ನಿವಾಸಿಗಳಾದ ಜುಬೈರ್, ಅಲ್ತಮಾಸ್ ಮತ್ತು ಸೈಫುಲ್ಲಾ ಅವರನ್ನು ಸ್ಫೋಟಕಗಳು ಮತ್ತು ಬಾಂಬ್ ತಯಾರಿಸುವ ಪದಾರ್ಥಗಳೊಂದಿಗೆ ಬಂಧಿಸಿದ್ದರು.
ಸ್ಫೋಟಕಗಳೊಂದಿಗೆ ಸಿಕ್ಕಿ ಬಿದ್ದಿದ್ದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಇವರಿಂದ ಭಯಾನಕ ಮಾಹಿತಿ ಹೊರ ಬಿದ್ದಿತ್ತು. ಜೈಪುರದಲ್ಲಿ ಸರಣಿ ಸ್ಫೋಟಕ್ಕೆ ಉಗ್ರರು ಸಿದ್ಧತೆ ನಡೆಸಿದ್ದರು. ಬಂಧಿತ ಭಯೋತ್ಪಾದಕರೆಲ್ಲರೂ ರತ್ಲಾಮ್ ನಿವಾಸಿಗಳು ಎಂದು ತಿಳಿದ ಮೇಲೆ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ಎಟಿಎಸ್ ನೆರವು ಪಡೆದ ರತ್ಲಂ ಪೊಲೀಸರು ಮಾಸ್ಟರ್ ಮೈಂಡ್ ಸರ್ಗಾನಾ ಇಮ್ರಾನ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ಇದೇ ಆಧಾರದ ಮೇಲೆ ಬಂಧಿತ ಮಾಸ್ಟರ್ ಮೈಂಡ್ ಇಮ್ರಾನ್ ನಿವಾಸ ಮತ್ತು ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು.