ಅಹಮದಾಬಾದ್, ಗುಜರಾತ್ :ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರ ನೆರವಿನೊಂದಿಗೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಉತ್ತರ ಪ್ರದೇಶದ ಮುಜಾಫರ್‌ನಗರದ ಮನೆಯೊಂದರಿಂದ 775 ಕೋಟಿ ರೂಪಾಯಿ ಮೌಲ್ಯದ 155 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ ಎಂದು ಎಟಿಎಸ್ ಅಧಿಕಾರಿಯೊಬ್ಬರು ಸೋಮವಾರ ಮಾಹಿತಿ ನೀಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜಿ ಹೈದರ್ ಝೈದಿಯ ಸಹೋದರಿಯ ಮನೆಯಲ್ಲಿ ಮಾದಕ ವಸ್ತು ದೊರೆತಿದೆ ಎಂದು ತಿಳಿದು ಬಂದಿದೆ.
ಏಪ್ರಿಲ್ 25ರಂದು ಗುಜರಾತ್ ಕರಾವಳಿಯ ಅರೇಬಿಯನ್ ಸಮುದ್ರದಲ್ಲಿ 280 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್‌ನೊಂದಿಗೆ ಒಂಬತ್ತು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಇದಾದ ಕೆಲವೇ ದಿನಗಳ ನಂತರ ಅಂದರೆ ಏಪ್ರಿಲ್ 27ರಂದು ದೆಹಲಿ ಮತ್ತು ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ ಎಟಿಎಸ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಜಂಟಿ ತಂಡಗಳು ಕಾರ್ಯಾಚರಣೆ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಈ ನಾಲ್ವರಲ್ಲಿ ಝೈದಿ ಕೂಡ ಒಬ್ಬನಾಗಿದ್ದ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ (ಎಟಿಎಸ್) ಸುನಿಲ್ ಜೋಶಿ, 'ಮುಜಾಫರ್‌ನಗರದಲ್ಲಿರುವ ತನ್ನ ಸಹೋದರಿಯ ಸ್ಥಳದಲ್ಲಿ ಝೈದಿ ದೊಡ್ಡ ಪ್ರಮಾಣದ ಮಾದಕವಸ್ತು ಬಚ್ಚಿಟ್ಟಿದ್ದಾನೆ ಎಂಬ ಮಾಹಿತಿಯ ಆಧಾರದಲ್ಲಿ ಎಟಿಎಸ್ ಅಧಿಕಾರಿಗಳು ದೆಹಲಿ ಮತ್ತು ಯುಪಿ ಪೊಲೀಸರ ಸಹಾಯದಿಂದ ಸ್ಥಳದ ಮೇಲೆ ದಾಳಿ ನಡೆಸಿ 775 ಕೋಟಿ ರೂಪಾಯಿ ಮೌಲ್ಯದ 155 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದೇವೆ. ಇದರ ಜೊತೆಗೆ ಮಾದಕ ವಸ್ತು ತಯಾರಿಸಲು ಬಳಸುವ 55 ಕೆ.ಜಿಯಷ್ಟು ರಾಸಾಯನಿಕವನ್ನು ಜಪ್ತಿ ಮಾಡಲಾಗಿದೆ ಎಂದಿದ್ದಾರೆ.
ಪ್ರಸ್ತುತ, ಝೈದಿ ದೆಹಲಿ ಎನ್‌ಸಿಬಿ ವಶದಲ್ಲಿದ್ದಾರೆ. ಸದ್ಯಕ್ಕೆ ಆತನ ಹಿಂದಿನ ಅಪರಾಧ ಚಟುವಟಿಕೆಗಳ ಬಗ್ಗೆ ಗುಜರಾತ್ ಎಟಿಎಸ್ ಬಳಿ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ ಎಂದು ಜೋಶಿ ಅವರು ಸ್ಪಷ್ಟಪಡಿಸಿದ್ದಾರೆ. ಗುಜರಾತ್ ಎಟಿಎಸ್ ತನಿಖೆ ನಡೆಸುತ್ತಿದ್ದು, ಝೈದಿಯ ಸಂಪರ್ಕಗಳು ಮತ್ತು ಹಣಕಾಸಿನ ಮೂಲಗಳನ್ನು ಕಂಡುಹಿಡಿಯಲು ಮುಂದಿನ ದಿನಗಳಲ್ಲಿ ಆರೋಪಿಯನ್ನು ಕಸ್ಟಡಿಗೆ ಪಡೆಯುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ನೇಪಾಳಿ ಗ್ಯಾಂಗ್ನಿಂದ ಉದ್ಯಮಿಯ ಮನೆ ದರೋಡೆ; ಸಂತ್ರಸ್ತನ ಕಾರ್ನಲ್ಲೇ ಪರಾರಿ!