ಗಾಂಧಿನಗರ(ಗುಜರಾತ್):ಬಹುನಿರೀಕ್ಷಿತ ಗುಜರಾತ್ ವಿಧಾನಸಭೆ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಡಿಸೆಂಬರ್ 1 ಮತ್ತು 5 ರಂದು ನಡೆದ ಚುನಾವಣೆಯಲ್ಲಿ ಶೇ.66.31 ರಷ್ಟು ಮತದಾನವಾಗಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಆಪ್ ಮಧ್ಯೆ ತ್ರಿಕೋನ ಸ್ಪರ್ಧೆ ನಡೆಸಿದ್ದವು. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ.
ಮತ ಎಣಿಕೆಗಾಗಿ ರಾಜ್ಯಾದ್ಯಂತ 37 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಹಮದಾಬಾದ್‌ನಲ್ಲಿ ಮೂರು, ಸೂರತ್‌ನಲ್ಲಿ ಎರಡು ಮತ್ತು ಆನಂದ್ ಜಿಲ್ಲೆಯಲ್ಲಿ 2 ಎಣಿಕೆ ಕೇಂದ್ರಗಳಿವೆ. ಅಲ್ಲದೇ, ಎಲ್ಲಾ ಜಿಲ್ಲೆಗಳಲ್ಲಿ ತಲಾ ಒಂದು ಮತ ಎಣಿಕೆ ಕೇಂದ್ರವಿದ್ದು ಏಕಕಾಲಕ್ಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮತ ಎಣಿಕೆಯ ವಿಡಿಯೋ ರೆಕಾರ್ಡಿಂಗ್:ಪ್ರತಿ ಮತಗಟ್ಟೆಯ ಟೇಬಲ್‌ನಲ್ಲಿ ಮೈಕ್ರೊ ಅಬ್ಸರ್ವರ್, ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಮತ ಎಣಿಕೆ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಇನ್ನಿಬ್ಬರು ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸಲಾಗಿದೆ. ಎಣಿಕೆಯ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್ ಮಾಡಲಾಗುವುದು ಎಂದು ಆಯೋಗ ತಿಳಿಸಿದೆ.
ಎಷ್ಟು ಇವಿಂಗಳ ಬಳಕೆ:2 ಹಂತದಲ್ಲಿ ನಡೆದ ಮತದಾನದಲ್ಲಿ ಮೊದಲ ಹಂತದಲ್ಲಿ 19 ಜಿಲ್ಲೆಗಳ 89 ಸ್ಥಾನಗಳಿಗೆ ನಡೆದ ಮತದಾನದಲ್ಲಿ 25,463 ಇವಿಎಂಗಳು ಬಳಕೆಯಾದರೆ, ಎರಡನೇ ಹಂತದಲ್ಲಿ 14 ಜಿಲ್ಲೆಗಳ 93 ಸ್ಥಾನಗಳಿಗೆ ಒಟ್ಟು 37,482 ಇವಿಎಂಗಳನ್ನು ಬಳಸಿಕೊಳ್ಳಲಾಗಿದೆ.
ಓದಿ:ಇಂದು ಗುಜರಾತ್, ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ