ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ 2022 ರ ಫಲಿತಾಂಶ ಹಲವಾರು ರಾಜಕೀಯ ಬದಲಾವಣೆಗಳಿಗೆ ಮುನ್ಸೂಚನೆ ನೀಡಿದೆ. ಹಿಂದಿನ ಚುನಾವಣೆಯಲ್ಲಿ ಗುಜರಾತ್ ಸೌರಾಷ್ಟ್ರದಲ್ಲಿ ಕಾಂಗ್ರೆಸ್ ಬಹಳಷ್ಟು ಸ್ಥಾನಗಳನ್ನು ಗೆದ್ದುಕೊಂಡು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿತ್ತು. ಆದರೆ ಈ ಬಾರಿ ಗುಜರಾತ್ ಸೌರಾಷ್ಟ್ರದಲ್ಲಿ ಆಮ್ ಆದ್ಮಿ ಪಕ್ಷ ಪ್ರವೇಶ ಮಾಡಿದ್ದು, ತನ್ನ ಖಾತೆ ತೆರೆಯುವ ಮೂಲಕ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
2017ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸೌರಾಷ್ಟ್ರ ಪ್ರದೇಶದಿಂದ ಕಾಂಗ್ರೆಸ್ 30 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಭಾರತೀಯ ಜನತಾ ಪಕ್ಷ ಕೇವಲ 18 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಆರಂಭಿಕ ಟ್ರೆಂಡ್‌ಗಳಲ್ಲಿ, ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಇಸುದನ್ ಗಧ್ವಿ ಖಂಭಾಲಿಯಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮೂಲುಭಾಯ್ ಬೇಡಾ ಅವರಗಿಂತ 2253 ಮತಗಳಿಂದ ಮುಂದಿದ್ದಾರೆ. ಆಮ್ ಆದ್ಮಿ ಪಕ್ಷದ ಕರಪಡ ರಾಜುಭಾಯಿ ಮೇರಂಭಾಯ್ ಚೋಟಿಲಾ ಕ್ಷೇತ್ರದಿಂದ ಮುನ್ನಡೆ ಸಾಧಿಸಿದ್ದಾರೆ. ಮಕ್ವಾನ ಉಮೇಶಭಾಯಿ ನಾರಣಭಾಯಿ ಬೋಟಡ್‌ನಿಂದಲೂ ಮುಂದಿದ್ದಾರೆ. 2017ರಲ್ಲಿ ಈ ಎಲ್ಲ ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದವು.