ನವಸಾರಿ (ಗುಜರಾತ್):ಗುಜರಾತ್ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಿಂದ ಮತದಾರರನ್ನು ಸೆಳೆಯುವ ಕಸರತ್ತು ಜೋರಾಗಿದೆ. ಸ್ಥಳೀಯರ ಮಾತ್ರವಲ್ಲದೇ, ಬೇರೆ ಬೇರೆ ರಾಜ್ಯಗಳಿಂದ ಬಂದು ಗುಜರಾತ್ನಲ್ಲಿ ನೆಲೆಸಿ ಮತದಾನದ ಹಕ್ಕು ಹೊಂದಿರುವವರ ಮೇಲೂ ರಾಜಕಾರಣಿಗಳ ದೃಷ್ಟಿ ನೆಟ್ಟಿದೆ. ಅದರಲ್ಲೂ, ನವಸಾರಿ ಜಿಲ್ಲೆಯಲ್ಲಿ ತಮಿಳು ಕುಟುಂಬಗಳನ್ನು ಸೆಳೆಯಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
ನವಸಾರಿ ಪಟ್ಟಣದಲ್ಲಿ ಸುಮಾರು 35 ವರ್ಷಗಳಿಂದಲೂ 250 ತಮಿಳು ಕುಟುಂಬಗಳು ವಾಸವಾಗಿವೆ. ಈ ಕುಟುಂಬಗಳು ಇಡ್ಲಿ, ದೋಸೆ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿವೆ. ಇಂತಹ ದಕ್ಷಿಣ ಭಾರತದ ಕುಟುಂಬಗಳನ್ನು ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ. ತಮಿಳು ಕುಟುಂಬಗಳಲ್ಲೇ ಅಂದಾಜು 1,200 ಮತದಾರರು ಇದ್ದಾರೆ. ಈ ಮತದಾರರನ್ನು ಆಕರ್ಷಿಸಲು ಭಾಷೆ ಮತ್ತು ಪ್ರಾಂತೀಯತೆ ವಿಚಾರವನ್ನು ಬಿಜೆಪಿ ಉತ್ತಮ ರೀತಿಯಲ್ಲಿ ಬಳಸುತ್ತಿದೆ.