ನವದೆಹಲಿ/ಅಹಮದಾಬಾದ್:ಗುಜರಾತ್ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಡಿಸೆಂಬರ್ 1ರಂದು ನಡೆಯಲಿದೆ. ಮತದಾನಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ. ಎರಡನೇ ಹಂತದ ಮತದಾನವು ಡಿಸೆಂಬರ್ 5ರಂದು ನಡೆಯಲಿದೆ.
ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ 19 ಜಿಲ್ಲೆಗಳ 89 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಜರುಗಲಿದ್ದು, ಮತದಾನಕ್ಕೆ 34,324 ಬ್ಯಾಲೆಟ್ ಯೂನಿಟ್, 34,324 ಕಂಟ್ರೋಲ್ ಯೂನಿಟ್ ಮತ್ತು 38,749 ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುವುದು. ನಗರ ಪ್ರದೇಶದ 9,014 ಹಾಗೂ ಗ್ರಾಮೀಣ ಪ್ರದೇಶದ 16,416 ಮತಗಟ್ಟೆಗಳು ಸೇರಿದಂತೆ 25,430 ಮತಗಟ್ಟೆಗಳು ಸ್ಥಾಪಿಸಲಾಗಿದೆ ಎಂದು ಚುನಾವಣಾ ಆಯೋಗದ ಆಯುಕ್ತರಾದ ಪಿ ಭಾರತಿ ತಿಳಿಸಿದ್ದಾರೆ.
788 ಅಭ್ಯರ್ಥಿಗಳು ಕಣದಲ್ಲಿ:ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ 718 ಪುರುಷ ಅಭ್ಯರ್ಥಿಗಳು ಮತ್ತು 70 ಮಹಿಳಾ ಅಭ್ಯರ್ಥಿಗಳು ಆಗಿದ್ದು, ಒಟ್ಟಾರೆ 39 ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿವೆ.
2.39 ಕೋಟಿ ಮತದಾರರು:89 ಸ್ಥಾನಗಳಿಗೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 2,39,76,670 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು ಮತದಾರರಲ್ಲಿ 1,24,33,362 ಪುರುಷ ಮತದಾರರು ಮತ್ತು 1,1,5,42,811 ಮಹಿಳಾ ಮತದಾರರು ಮತ್ತು 497 ತೃತೀಯ ಮತದಾರರು ನೋಂದಣಿಯಾಗಿದ್ದಾರೆ. 18ರಿಂದ 19 ವರ್ಷದೊಳಗಿನ ಒಟ್ಟು 5,75,560 ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ಚುನಾವಣಾ ಆಯೋಗದ ಆಯುಕ್ತರು ಮಾಹಿತಿ ನೀಡಿದ್ದಾರೆ.
99 ವರ್ಷಕ್ಕಿಂತ ಮೇಲ್ಪಟ್ಟ 4.945 ಮತದಾರರು:ಹಿರಿಯ ನಾಗರಿಕರು ಸಹ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ಹಂತದಲ್ಲಿ 99 ವರ್ಷಕ್ಕಿಂತ ಮೇಲ್ಪಟ್ಟ 4945 ಮತದಾರರು ಸಹ ಮತದಾನ ಮಾಡಲಿದ್ದಾರೆ. ಅಲ್ಲದೇ, 163 ಎನ್‌ಆರ್‌ಐಗಳು/ಎನ್‌ಆರ್‌ಜಿಗಳು ಮತ ಚಲಾಯಿಸಲು ಗುಜರಾತ್‌ಗೆ ತಲುಪಿದ್ದಾರೆ. ಇದರಲ್ಲಿ 125 ಪುರುಷರು ಮತ್ತು 38 ಮಹಿಳೆಯರು ಸೇರಿದ್ದಾರೆ ಎಂದು ಹೇಳಿದ್ದಾರೆ.