ಗುಜರಾತ್: ಪ್ರಬಲ ಸ್ಫೋಟದ ನಂತರ ಎರಡು ಮನೆಗಳು ಕುಸಿದಿದ್ದರಿಂದ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲೋಲ್ ಪಟ್ಟಣದಲ್ಲಿ ನಡೆದಿದೆ.
ಗ್ಯಾಸ್ ಪೈಪ್ಲೈನ್ ಸ್ಫೋಟ ಪಂಚವತಿ ಪ್ರದೇಶದ ಅಡುಗೆ ಅನಿಲ ಪೂರೈಸುವ ಪೈಪ್ಲೈನ್ ಸೋರಿಕೆಯಿಂದ ಈ ಪ್ರಬಲ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಇಬ್ಬರು ಸಾವನ್ನಪ್ಪಿ, ಓರ್ವ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಗಾಂಧಿನಗರ ಕಲೆಕ್ಟರ್ ಕುಲದೀಪ್ ಆರ್ಯ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಭಾರತ್ ಪೆಟ್ರೋಲಿಯಂನ ಜಂಟಿ ಉದ್ಯಮವಾದ ಸಬರಮತಿ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಗುಜರಾತ್ ರಾಜ್ಯ ಪೆಟ್ರೋಲಿಯಂ ನಿಗಮ (ಜಿಎಸ್‌ಪಿಸಿ) ಈ ಪ್ರದೇಶದಲ್ಲಿ ಪೈಪ್ಲೈನ್ ಮೂಲಕ ಅಡುಗೆ ಅನಿಲವನ್ನು ಒದಗಿಸುತ್ತಿದ್ದವು ಎಂದು ತಿಳಿದು ಬಂದಿದೆ.
ಓದಿ: ಜಮ್ಮುವಿನಲ್ಲಿ ಕಮಲಕ್ಕೆ ಸೈ: ಕಾಶ್ಮೀರದಲ್ಲಿ ಗುಪ್ಕಾರ್ ಕೂಟಕ್ಕೆ ಜೈಜೈ..!
"ಸಂಪೂರ್ಣವಾಗಿ ನಾಶವಾದ ಎರಡು ಮನೆಗಳಲ್ಲಿ ನವೆಂಬರ್ 2019 ರಿಂದ ಯಾರೂ ವಾಸಿಸುತ್ತಿರಲಿಲ್ಲ. ಆದರೆ, ಮೂರು ವ್ಯಕ್ತಿಗಳು ಸುತ್ತಮುತ್ತಲಿನ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದರು". ಪ್ರಾಥಮಿಕ ತನಿಖೆಯಲ್ಲಿ ಸೋರಿಕೆಯಾದ ಅಡುಗೆ ಅನಿಲದಿಂದ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಯಾರೂ ವಾಸವಾಗದ ಮನೆಯಲ್ಲಿ ಪೈಪ್ಲೈನ್ ಅನಿಲ ಸೋರಿಕೆಯಾದ ಪರಿಣಾಮ ಈ ಭೀಕರ ಅನಾಹುತ ಸಂಭವಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡುವ ಮೂಲಕ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಸ್ಥಳೀಯರ ಪ್ರಕಾರ, ಸ್ಫೋಟವು ಎಷ್ಟು ತೀವ್ರವಾಗಿತ್ತು ಎಂದರೆ, ಎರಡು ಅಂತಸ್ತಿನ ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಸ್ಫೋಟದಿಂದ ಅಕ್ಕ-ಪಕ್ಕದ ಕೆಲವು ಮನೆಗಳು, ವಾಹನಗಳಿಗೆ ಹಾನಿಯಾಗಿದೆ.