ಖೇಡಾ (ಗುಜರಾತ್) : ಸದ್ಯ ದೇಶಾದ್ಯಂತ ದಸರಾ ಸಂಭ್ರಮ ಮನೆಮಾಡಿದೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಗುಜರಾತ್ನಲ್ಲಿ ಶೋಕದ ಘಟನೆಯೊಂದು ಸಂಭವಿಸಿದೆ. ಖೇಡಾ ಜಿಲ್ಲೆಯಲ್ಲಿ 17 ವರ್ಷದ ಬಾಲಕನೊಬ್ಬ ಗರ್ಬಾ ಆಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನವರಾತ್ರಿ ಹಬ್ಬದ ಆರನೇ ದಿನದಂದು ಈ ದಾರುಣ ಘಟನೆ ನಡೆದಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾ. ಆಯುಷ್ ಪಟೇಲ್, "17 ವರ್ಷದ ಬಾಲಕ ವೀರ್ ಶಾ ಎಂಬಾತ ಕಪದ್ವಾಂಜ್‌ನ ಮೈದಾನದಲ್ಲಿ ಗರ್ಬಾ ನೃತ್ಯ ಮಾಡುತ್ತಿದ್ದಾಗ ತಲೆ ಸುತ್ತು ಬಂದು ಮೂರ್ಛೆ ಹೋಗಿದ್ದಾನೆ. ತಕ್ಷಣ ಅಲ್ಲಿದ್ದವರು ಅವನನ್ನು ಆರೈಕೆ ಮಾಡಿದ್ದಾರೆ. ಬಳಿಕ, ಘಟನಾ ಸ್ಥಳದಲ್ಲಿದ್ದ ಸ್ವಯಂಸೇವಕರ ತಂಡವು ತಕ್ಷಣವೇ ಆಸ್ಪತ್ರೆಗೆ ಕರೆತಂದಾಗ ನಾವು ಪರಿಶೀಲನೆ ನಡೆಸಿದ್ದು, ಬಾಲಕನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ನಾಡಿಮಿಡಿತ ಕೂಡ ನಿಂತು ಹೋಗಿತ್ತು" ಎಂದರು.
ಇನ್ನು, ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದೆ. ವೀರ್ ಅವರ ತಂದೆ ರಿಪಾಲ್ ಶಾ ಸೇರಿದಂತೆ ಕುಟುಂಬಸ್ಥರು ಮಗನ ಸಾವಿನ ಸುದ್ದಿ ತಿಳಿದ ನಂತರ ಆಘಾತಕ್ಕೊಳಗಾಗಿದ್ದಾರೆ.
"ಗರ್ಬಾ ಆಡುವಾಗ ಜಾಗರೂಕರಾಗಿರಿ ಮತ್ತು ವಿಶ್ರಾಂತಿ ತೆಗೆದುಕೊಳ್ಳದೆ ನೃತ್ಯ ಮಾಡಬೇಡಿ, ಇಂದು ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ, ಅಂತಹ ದುಃಖದ ಘಟನೆ ಬೇರೆಯವರಿಗೆ ಎದುರಾಗಬಾರದು. ಎಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಬಯಸುತ್ತೇನೆ" ಅಂತಾ ಮೃತ ಬಾಲಕನ ತಂದೆ ವಿನಂತಿ ಮಾಡಿದ್ದಾರೆ.