ಹೈದರಾಬಾದ್(ತೆಲಂಗಾಣ) :ಕೊರೊನಾ ರೂಪಾಂತರಿ ಒಮಿಕ್ರಾನ್ ಜನರನ್ನು ಎಷ್ಟು ಭೀತಿಗೊಳಿಸಿದೆ ಎಂದರೆ, ತೆಲಂಗಾಣದ ಗ್ರಾಮವೊಂದರ ವ್ಯಕ್ತಿಯೊಬ್ಬನಲ್ಲಿ ಒಮಿಕ್ರಾನ್ ಪತ್ತೆಯಾದ ಬಳಿಕ ಇಡೀ ಗ್ರಾಮವನ್ನು 10 ದಿನಗಳವರೆಗೆ ಲಾಕ್ಡೌನ್ಗೆ ಒಳಪಡಿಸಲಾಗಿದೆ.
ರಾಜಣ್ಣ ಸಿರ್ಸಿಲಾ ಜಿಲ್ಲೆಯ ಮುಸ್ತಾಬಾದ್ ವಲಯದ ಗೂಡಂ ಗ್ರಾಮ ಒಮಿಕ್ರಾನ್ನಿಂದ ತಪ್ಪಿಸಿಕೊಳ್ಳಲು ಸ್ವಯಂ ಲಾಕ್ಡೌನ್ ವಿಧಿಸಿಕೊಂಡಿದೆ. ಈ ಗ್ರಾಮದ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ಗಲ್ಫ್ ರಾಷ್ಟ್ರದಿಂದ ಬಂದಿದ್ದರು. ಬಳಿಕ ಕೊರೊನಾ ಟೆಸ್ಟ್ ವೇಳೆ ಒಮಿಕ್ರಾನ್ ಪತ್ತೆಯಾಗಿದೆ.
ಇದಲ್ಲದೇ ಅವರ ಕುಟುಂಬದ ಇಬ್ಬರಲ್ಲಿಯೂ ಕೊರೊನಾ ದೃಢಪಟ್ಟಿದೆ. ಇದರಿಂದ ಇನ್ನಷ್ಟು ಜನರಿಗೆ ಒಮಿಕ್ರಾನ್ ವ್ಯಾಪಿಸದಿರಲು ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ಗ್ರಾಮವನ್ನು ಲಾಕ್ಡೌನ್ ಮಾಡಲಾಗಿದೆ.
ಲಾಕ್ಡೌನ್ ನಿಯಮದಂತೆ ಬೆಳಗ್ಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಗ್ರಾಮದಲ್ಲಿ ವಿನಾಕಾರಣ ಯಾರೂ ಹೊರಗೆ ಸುತ್ತಾಡುವಂತಿಲ್ಲ.