ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಇಂದು ನಡೆದ 45ನೇ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಕೌನ್ಸಿಲ್ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ತೈಲೋತ್ಪನ್ನವನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಮಹತ್ವದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ನಿರ್ಮಲಾ ಸೀತಾರಾಮನ್ ಮಾತನಾಡಿದರು.
ಪೆಟ್ರೋಲ್- ಡೀಸೆಲ್ GST ವ್ಯಾಪ್ತಿಗಿಲ್ಲ: ನಿರ್ಮಲಾ ಸೀತಾರಾಮನ್ ಪ್ರಮುಖಾಂಶಗಳು:
1. ಗುತ್ತಿಗೆ ಆಧಾರದಲ್ಲಿ ಆಮದು ಮಾಡಿಕೊಳ್ಳುವ ವಿಮಾನಗಳಿಗೆ ಎರಡು ಬಾರಿ ನೀಡಬೇಕಾದ ತೆರಿಗೆಯಿಂದ ವಿನಾಯತಿ ನೀಡಲಾಗಿದೆ.
2.ಕೆಲವು ಪರಿಣಾಮಕಾರಿ ಜೀವರಕ್ಷಕ ಔಷಧಿಗಳ ಮೇಲಿನ ಜಿಎಸ್ಟಿಗೆ ವಿನಾಯತಿ ನೀಡಲಾಗಿದೆ.
3. ಕೋವಿಡ್ ಔಷಧಿಗಳ ಮೇಲಿನ ಜಿಎಸ್ಟಿ ದರಗಳನ್ನು ಸೆಪ್ಟೆಂಬರ್ 30ರಿಂದ ಡಿಸೆಂಬರ್ 31ರವರೆಗೆ ವಿಸ್ತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
4. ಪ್ರಮುಖವಾಗಿ Zolgensma & Viltepso ಔಷಧಿಗಳ ಬೆಲೆ 16 ಕೋಟಿ ರೂ ಆಗಿದ್ದು, ಇವುಗಳ ಮೇಲಿನ ಜಿಎಸ್ಟಿ ವಿನಾಯಿತಿ ನೀಡಲಾಗಿದೆ.
5. ಕೋವಿಡ್ ಚಿಕಿತ್ಸೆಗೆ ಬಳಕೆ ಮಾಡುವ ಔಷಧಿಗಳ ಮೇಲಿನ ರಿಯಾಯತಿ ದರವನ್ನು ಡಿಸೆಂಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ.
6. ಬಯೋ ಡೀಸೆಲ್ ಮೇಲಿನ ಜಿಎಸ್ಟಿ ದರವನ್ನು ಶೇ. 12ರಿಂದ ಶೇ 5ಕ್ಕೆ ಇಳಿಸಲಾಗಿದೆ.
ಜಿಎಸ್ಟಿ ವ್ಯಾಪ್ತಿಗಿಲ್ಲ ಪೆಟ್ರೋಲ್, ಡೀಸೆಲ್:
ಇದೇ ವೇಳೆ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಪೆಟ್ರೋಲ್, ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ತರುವ ವಿಚಾರವಾಗಿ ಇಂದಿನ ಕೌನ್ಸಿಲ್ ಸಭೆಯಲ್ಲಿ ಸುದೀರ್ಘವಾದ ಚರ್ಚೆಯಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಕೌನ್ಸಿಲ್ ಸಭೆಯಲ್ಲಿನ ಎಲ್ಲ ಸದಸ್ಯರು ಇದೇ ರೀತಿಯ ಅಭಿಮತ ವ್ಯಕ್ತಪಡಿಸಿದ್ದಾರೆಂದು ಅವರು ತಿಳಿಸಿದರು.
ಕೇರಳ ಹೈಕೋರ್ಟ್ ಆದೇಶದ ನಂತರ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಅನ್ನು ತರಬೇಕು ಎಂಬ ಮಾತು ಕೇಳಿ ಬಂದಿತ್ತು. ಕೋರ್ಟ್ ನಿರ್ದೇಶನದಂತೆ ಕೌನ್ಸಿಲ್ ಸಭೆಯಲ್ಲಿ ಅದರ ಬಗ್ಗೆ ಚರ್ಚೆ ನಡೆಸಲಾಗಿದ್ದು, ಕೌನ್ಸಿಲ್ ಸದಸ್ಯರು ಅದನ್ನು ಜಿಎಸ್ಟಿ ವ್ಯಾಪ್ತಿಯೊಳಗೆ ಸೇರಿಸುವ ಬಯಕೆ ವ್ಯಕ್ತಪಡಿಸಿಲ್ಲ ಎಂದರು. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ಗೆ ವರದಿ ಮಾಡಲಾಗುವುದು ಎಂದು ತಿಳಿಸಿದರು.
ಜೂನ್ ತಿಂಗಳಲ್ಲಿ ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಹಾಗು ಡೀಸೆಲ್ ತರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.