ಕರ್ನಾಟಕ

karnataka

ETV Bharat / bharat

ಜಿಎಸ್​​ಟಿ ಸಂಗ್ರಹ ದಾಖಲೆಯ ₹1.87 ಲಕ್ಷ ಕೋಟಿಗೆ ಏರಿಕೆ: ಕರ್ನಾಟಕಕ್ಕೆ 2ನೇ ಸ್ಥಾನ

ಸರಕು ಮತ್ತು ಸೇವಾ ತೆರಿಗೆ ಶೇ.12ರಷ್ಟು ಏರಿಕೆಯಾಗಿದ್ದು 1.87 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದು ಈವರೆಗೆ ಸಂಗ್ರಹವಾದ ದಾಖಲೆಯ ಮೊತ್ತವಾಗಿದೆ.

Representative image
ಪ್ರಾತಿನಿಧಿಕ ಚಿತ್ರ

By

Published : May 2, 2023, 7:27 AM IST

ನವದೆಹಲಿ: ಏಪ್ರಿಲ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಶೇ.12 ರಷ್ಟು ಏರಿಕೆಯಾಗಿದ್ದು, 1.87 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಇದು ಈವರೆಗೆ ಸಂಗ್ರಹವಾದ ದಾಖಲೆಯ ಮೊತ್ತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ. ಏಪ್ರಿಲ್ 2022ರಲ್ಲಿ ಜಿಎಸ್‌ಟಿ ಸಂಗ್ರಹ ಸುಮಾರು 1.68 ಲಕ್ಷ ಕೋಟಿ ರೂ. ಇತ್ತು. "ಏಪ್ರಿಲ್ 2023 ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,87,035 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ 38,440 ಕೋಟಿ ರೂ., ಎಸ್‌ಜಿಎಸ್‌ಟಿ ರೂ. 47,412 ಕೋಟಿ, ಐಜಿಎಸ್‌ಟಿ ರೂ. 89,158 ಕೋಟಿ, ಸೆಸ್ 12,025 ಕೋಟಿ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದೇ ಮೊದಲ ಬಾರಿಗೆ ಒಟ್ಟು ಜಿಎಸ್‌ಟಿ ಸಂಗ್ರಹವು 1.75 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ. ಈ ಹಿಂದೆ 1.68 ಕೋಟಿ ಸಂಗ್ರಹವಾಗಿತ್ತು. ಇದು ಈವರೆಗಿನ ದಾಖಲೆಯ ಮೊತ್ತವಾಗಿತ್ತು. ಕಳೆದ ವರ್ಷ ಏಪ್ರಿಲ್​ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್​​ ತಿಂಗಳಿನಲ್ಲಿ ಶೇ. 16ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಒಟ್ಟು ಸಂಗ್ರಹ ರೂ 18.10 ಲಕ್ಷ ಕೋಟಿಗಳಷ್ಟಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 22 ರಷ್ಟು ಹೆಚ್ಚು.

ಪ್ರಧಾನಿ ಶ್ಲಾಘನೆ:ದಾಖಲೆಯ ಜಿಎಸ್‌ಟಿ ಸಂಗ್ರಹವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ "ಭಾರತದ ಆರ್ಥಿಕತೆಗೆ ಸಿಹಿ ಸುದ್ದಿ. ಕಡಿಮೆ ತೆರಿಗೆ ದರಗಳ ಹೊರತಾಗಿಯೂ ಹೆಚ್ಚುತ್ತಿರುವ ತೆರಿಗೆ ಸಂಗ್ರಹ ಜಿಎಸ್‌ಟಿ ಹೇಗೆ ಏಕೀಕರಣ ಮತ್ತು ಅನುಸರಣೆಯನ್ನು ಹೆಚ್ಚಿಸಿದೆ ಎಂಬುದರ ಯಶಸ್ಸನ್ನು ತೋರಿಸುತ್ತದೆ" ಎಂದು ಟ್ವೀಟ್​​ ಮಾಡಿದ್ದಾರೆ.

ದಾಖಲೆಯ ಸಂಗ್ರಹದ ಹಿಂದಿನ ಕಾರಣಗಳು :

  • ಕೋವಿಡ್ ಸಾಂಕ್ರಾಮಿಕದ 2ನೇ ಅಲೆ ನಂತರ ಸುಧಾರಿತ ಆರ್ಥಿಕ ಚಟುವಟಿಕೆ ಮತ್ತು ಚೇತರಿಕೆ.
  • ಇ-ಇನ್‌ವಾಯ್ಸಿಂಗ್, ಇ-ವೇ ಬಿಲ್‌ಗಳು, ಡೇಟಾ ಅನಾಲಿಟಿಕ್ಸ್ ಮತ್ತು ಆಡಿಟ್‌ಗಳಂತಹ ಹೆಚ್ಚಿದ ಅನುಸರಣೆ.
  • ಆಟೋಮೊಬೈಲ್‌ಗಳು, ಬೆಲೆಬಾಳುವ ವಸ್ತುಗಳಿಗೆ ಹೆಚ್ಚಿದ ಬೇಡಿಕೆ.
  • ಎಫ್‌ಎಂಸಿಜಿ, ಐಟಿ ಮತ್ತು ಇ-ಕಾಮರ್ಸ್‌ನಂತಹ ವಲಯಗಳಿಂದ ಹೆಚ್ಚಿನ ತೆರಿಗೆ ಸಂಗ್ರಹ.

ಕರ್ನಾಟಕಕ್ಕೆ 2ನೇ ಸ್ಥಾನ: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಭಾರತದಾದ್ಯಂತ ಏಪ್ರಿಲ್ ತಿಂಗಳಿನಲ್ಲಿ ಸಂಗ್ರಹವಾಗಿರುವ ಒಟ್ಟು ಜಿಎಸ್​ಟಿ ಪೈಕಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅತಿಹೆಚ್ಚು ಜಿಎಸ್​ಟಿ ಸಂಗ್ರಹವಾಗಿದೆ. ರಾಜ್ಯದಲ್ಲಿ 14,593 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ. ಮಹಾರಾಷ್ಟ್ರ 33,196 ಕೋಟಿ ರೂ. ಜಿಎಸ್​ಟಿ ಸಂಗ್ರಹಿಸಿದೆ.

ಜಿಎಸ್‌ಟಿ ಎಂದರೇನು?:ಸರಕು ಮತ್ತು ಸೇವಾ ತೆರಿಗೆ. ಇದು ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾದ ಪರೋಕ್ಷ ತೆರಿಗೆ. ಬಹು ಹಂತದ, ಗಮ್ಯಸ್ಥಾನ ಆಧಾರಿತ ತೆರಿಗೆ ಪದ್ಧತಿಯಾಗಿದೆ. ಪ್ರತಿ ಮೌಲ್ಯ ಸೇರ್ಪಡೆಯ ಮೇಲೆ ವಿಧಿಸಲಾಗುತ್ತದೆ.

ಜಿಎಸ್‌ಟಿ ವಿಧಗಳು:ಜಿಎಸ್‌ಟಿಯಲ್ಲಿ 4 ವಿಧಗಳಿವೆ.

1. ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST).

2. ರಾಜ್ಯ ಸರಕು ಮತ್ತು ಸೇವಾ ತೆರಿಗೆ (SGST).

3. ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ (UTGST).

4. ಸಮಗ್ರ ಸರಕು ಮತ್ತು ಸೇವಾ ತೆರಿಗೆ (IGST).

ನಾಲ್ಕು ಜಿಎಸ್‌ಟಿಗಳ ಅರ್ಥ:ರಾಜ್ಯ ಜಿಎಸ್‌ಟಿ- ಇದನ್ನು ರಾಜ್ಯ ಸರ್ಕಾರ ಸಂಗ್ರಹಿಸುತ್ತದೆ. ಕೇಂದ್ರ ಜಿಎಸ್‌ಟಿ-ಇದನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತದೆ. ಇಂಟಿಗ್ರೇಟೆಡ್ ಜಿಎಸ್‌ಟಿ ಇದನ್ನು ಕೇಂದ್ರ ಸರ್ಕಾರ ಅಂತರ-ರಾಜ್ಯ ವಹಿವಾಟುಗಳು ಮತ್ತು ಆಮದುಗಳಿಗಾಗಿ ಸಂಗ್ರಹಿಸುತ್ತದೆ. ಕೇಂದ್ರಾಡಳಿತ ಪ್ರದೇಶ ಜಿಎಸ್‌ಟಿ ಇದನ್ನು ಕೇಂದ್ರಾಡಳಿತ ಪ್ರದೇಶ ಸರ್ಕಾರ ಸಂಗ್ರಹಿಸುತ್ತದೆ

ಇದನ್ನೂ ಓದಿ:ಮಾರ್ಚ್​​ನಲ್ಲಿ ದೇಶದ ಜಿಎಸ್​ಟಿ ಆದಾಯ ₹1.60 ಲಕ್ಷ ಕೋಟಿಗೆ ಏರಿಕೆ

ABOUT THE AUTHOR

...view details