ನವದೆಹಲಿ:ಕೋವಿಡ್ನಿಂದ ಕುಂಠಿತಗೊಂಡಿದ್ದ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಸರಕು ಮತ್ತು ಸೇವಾ ತೆರಿಗೆ(GST) ಸಂಗ್ರಹ ಏರಿಕೆಯಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸಂಗ್ರಹವಾಗಿದ್ದ, ಜಿಎಸ್ಟಿಗಿಂತ ಶೇಕಡಾ 30ರಷ್ಟು ತೆರಿಗೆ ಸಂಗ್ರಹ ಅಧಿಕವಾಗಿದೆ.
ಕೋವಿಡ್ ಕಾರಣದಿಂದಾಗಿ ಹಿಂದಿನ ವರ್ಷ ಜಿಎಸ್‌ಟಿ(GST) ಸಂಗ್ರಹ ಕುಸಿತ ಕಂಡಿತ್ತು. ಈಗ ಆಗಸ್ಟ್ ತಿಂಗಳ ವರದಿ ಬಹಿರಂಗವಾಗಿದ್ದು, ಸುಮಾರು 1.1 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ.
ಜಿಎಸ್ಟಿಯಲ್ಲಿ ಕೇಂದ್ರ ಜಿಎಸ್‌ಟಿ, ರಾಜ್ಯ ಜಿಎಸ್‌ಟಿ ಮತ್ತು ಸಮಗ್ರ ಜಿಎಸ್‌ಟಿ ಎಂಬ ಮೂರು ವಿಧಗಳಿವೆ. ಆಗಸ್ಟ್ ತಿಂಗಳಲ್ಲಿ ಒಟ್ಟು 1,12,020 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಕೇಂದ್ರ ಜಿಎಸ್‌ಟಿ 20,522 ಕೋಟಿ ರೂಪಾಯಿ, ರಾಜ್ಯ ಜಿಎಸ್‌ಟಿ 26,605 ಕೋಟಿ ರೂಪಾಯಿ, ರಾಜ್ಯ ಮತ್ತು ಕೇಂದ್ರದ ನಡುವೆ ಸಮವಾಗಿ ಹಂಚಿಕೆಯಾಗುವ ಸಮಗ್ರ ಜಿಎಸ್‌ಟಿ 56,247 ಕೋಟಿ ರೂಪಾಯಿಯಿದೆ.
ಸಮಗ್ರ ಜಿಎಸ್ಟಿಯಲ್ಲಿ 26,884 ಕೋಟಿ ರೂಪಾಯಿ ಸರಕುಗಳ ಆಮದು ಮೇಲೆ ವಿಧಿಸಲಾಗಿದ್ದ ಜಿಎಸ್‌ಟಿ ಆಗಿದೆ. ಜೊತೆಗೆ 8,646 ಕೋಟಿ ರೂಪಾಯಿ ತೆರಿಗೆ ಮೇಲೆ ವಿಧಿಸುವ ಸೆಸ್ನಿಂದ ಬಂದ ಆದಾಯವಾಗಿದೆ.
ರಾಜ್ಯಗಳ ಪಾಲು ನೀಡುವ ವಿಚಾರದಲ್ಲಿ ಸಿಜಿಎಸ್‌ಟಿಯ 23,043 ಕೋಟಿ ರೂಪಾಯಿ ಮತ್ತು ಎಸ್‌ಜಿಎಸ್‌ಟಿಯ 19,139 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಂಚಿಕೆ ಮಾಡಲಿದೆ. ಇದರ ಜೊತೆಗೆ ಐಜಿಎಸ್ಟಿಯನ್ನು 50:50 ಅನುಪಾತದಲ್ಲಿ ರಾಜ್ಯ ಮತ್ತು ಕೇಂದ್ರಗಳ ಜೊತೆಗೆ ಹಂಚಿಕೆಯಾಗಬೇಕಿದ್ದು, ತಾತ್ಕಾಲಿಕವಾಗಿ 24 ಸಾವಿರ ಕೋಟಿ ರೂಪಾಯಿಗಳನ್ನು ಹಂಚಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಆಗಸ್ಟ್ನಲ್ಲಿ ಸೇವೆಗಳ ಆಮದು ಸೇರಿದಂತೆ ದೇಶೀಯ ವಹಿವಾಟುಗಳ ಆದಾಯದ ಮಟ್ಟವೂ ಹೆಚ್ಚಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಬಂದ ಆದಾಯಕ್ಕಿಂತ ಶೇಕಡಾ 27ರಷ್ಟು ಹೆಚ್ಚಾಗಿದೆ. ಆಗಸ್ಟ್ 2021ರಲ್ಲಿ ಜಿಎಸ್‌ಟಿ ಸಂಗ್ರಹವು ಆಗಸ್ಟ್ 2020ರಲ್ಲಿ ಜಿಎಸ್‌ಟಿ ಸಂಗ್ರಹಕ್ಕಿಂತ ಶೇಕಡಾ 30ರಷ್ಟು ಹೆಚ್ಚಾಗಿದ್ದರೆ, 2019ರ ಆಗಸ್ಟ್ಗಿಂತ ಶೇಕಡಾ 14ರಷ್ಟು ಹೆಚ್ಚಾಗಿದೆ.
ನವೆಂಬರ್ 2020ರಿಂದ ಕೈಗೊಂಡ ತೆರಿಗೆ ವಂಚನೆ ವಿರೋಧಿ ಕ್ರಮಗಳ ಕಾರಣದಿಂದಾಗಿ, ಜಿಎಸ್‌ಟಿ ಸಂಗ್ರಹವು ಹೆಚ್ಚಾಗಿದೆ. ಜುಲೈ ಮತ್ತು ಆಗಸ್ಟ್ನ ಜಿಎಸ್‌ಟಿ ಸಂಗ್ರಹವು 1 ಲಕ್ಷ ಕೋಟಿ ದಾಟಿದೆ. ಇದು ಆರ್ಥಿಕತೆ ವೇಗವಾಗಿ ಚೇತರಿಕೆ ಕಾಣುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ:ಪೊಲೀಸ್ ಮಾಹಿತಿದಾರನೆಂಬ ಶಂಕೆ.. ಗ್ರಾಮ ರಕ್ಷಕನನ್ನು ಮನೆಯಿಂದ ಹೊರಗೆಳೆದು ಕೊಂದ ನಕ್ಸಲರು!