ಅಹ್ಮದ್ನಗರ (ಮಹಾರಾಷ್ಟ್ರ):ಸರಣಿ ಹಂತಕ ಎಂದೇ ಕುಖ್ಯಾತನಾಗಿದ್ದ ಆರೋಪಿ ಮಚ್ಚಿಂದ್ರ ಅಲಿಯಾಸ್ ಅಣ್ಣಾ ವೈದ್ಯನಿಗೆ, ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಕ್ಕೆ ಆಕ್ರೋಶಗೊಂಡು ಗುಂಪೊಂದು ಥಳಿಸಿದೆ. ಸಿಟ್ಟಿಗೆದ್ದಿದ್ದ ಗುಂಪು ತೀವ್ರವಾಗಿ ಥಳಿಸಿದ ಪರಿಣಾಮ ಕುಖ್ಯಾತ ಆರೋಪಿ ಅಣ್ಣಾ ವೈದ್ಯ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಅಹ್ಮದ್ನಗರ ಜಿಲ್ಲೆಯ ಅಕೋಲೆ ತಾಲೂಕಿನ ಸುಗಾಂವ್ ಖುರ್ದ್ನಲ್ಲಿ ನಾಲ್ವರು ಮಹಿಳೆಯರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಚ್ಚಿಂದ್ರ ಅಲಿಯಾಸ್ ಅಣ್ಣಾ ವೈದ್ಯ (58), ಭಾನುವಾರ ಸಂಜೆ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದನು. ಈ ಘಟನೆಯಿಂದ ಕೋಪಗೊಂಡು ಗ್ರಾಮಸ್ಥರ ಗುಂಪೊಂದು ಅಣ್ಣಾ ವೈದ್ಯನಿಗೆ ಮನಬಂದಂತೆ ಥಳಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಗುಂಪಿನ ಥಳಿತದಿಂದ ಅಣ್ಣಾ ವೈದ್ಯನನ್ನು ಕಾಪಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಅಣ್ಣಾ ವೈದ್ಯ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾರು ಈ ಅಣ್ಣಾ ವೈದ್ಯ?:ಕೆಲವು ವರ್ಷಗಳ ಹಿಂದೆ ವಿದ್ಯುತ್ ಮೋಟರ್ ಕೇಬಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಅಣ್ಣಾ ವೈದ್ಯನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣದ ತನಿಖೆಯ ಭಾಗವಾಗಿ ಆತನ ಜಮೀನಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ನಾಲ್ವರು ಮಹಿಳೆಯರ ಅಸ್ಥಿಪಂಜರ ಪತ್ತೆಯಾಗಿದ್ದು, ಸರಣಿ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ವೈದ್ಯ ವಿರುದ್ಧ ಸಂಗಮ್ನೇರ್ ಜಿಲ್ಲಾ ನ್ಯಾಯಾಲಯದಲ್ಲಿ ನಾಲ್ವರು ಮಹಿಳೆಯರನ್ನು ಕೊಂದು ಅವರ ಶವಗಳನ್ನು ಹೊಲದಲ್ಲಿ ಹೂತು ಹಾಕಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.