ಸೀತಾಮರ್ಹಿ(ಬಿಹಾರ)ಪ್ರೀತಿಸುತ್ತಿದ್ದಗೆಳತಿಯನ್ನೇ ಅಪಹರಿಸಿ ಜೈಲು ಸೇರಿದ್ದ ಪ್ರಿಯಕರನೊಬ್ಬ, ಶನಿವಾರ ಪೊಲೀಸ್ ಕಸ್ಟಡಿಯಲ್ಲಿದ್ದುಕೊಂಡೇ ಕೋರ್ಟ್ ಆವರಣದಲ್ಲಿ ಅಪಹರಿಸಿದ್ದ ಗೆಳತಿಯೊಂದಿಗೆ ವಿವಾಹವಾಗಿರುವ ವಿಚಿತ್ರ ಘಟನೆ ಬಿಹಾರ ರಾಜ್ಯದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ.
ಸೀತಾಮರ್ಹಿ ಜಿಲ್ಲೆಯ ಬೈರ್ಗಾನಿಯಾ ನಿವಾಸಿ ಅರ್ಚನಾ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜಕುಮಾರ್ ಅವರು ಸೀತಾಮರ್ಹಿ ಜೈಲಿನ ಬಂಧನದಲ್ಲಿದ್ದರು. ರಾಜಕುಮಾರ್ ಮತ್ತು ಅರ್ಚನಾ ಒಬ್ಬರನ್ನೊಬ್ಬರು ಬಹಳಷ್ಟು ದಿನಗಳಿಂದ ಪ್ರೀತಿಸುತ್ತಿದ್ದರು. ಒಂದು ದಿನ ರಾಜಕುಮಾರ್ ತನ್ನ ಗೆಳತಿ ಅರ್ಚನಾ ಇಬ್ಬರು ಸೇರಿ ಓಡಿಹೋಗಿದ್ದರು. ಆಗ ತಂದೆ ಸಿಟ್ಟಿಗೆದ್ದು, ಮಗಳು ಅರ್ಚನಾಳನ್ನು ಅಪಹರಣ ಮಾಡಲಾಗಿದೆ ಎಂದು ಸೀತಾಮರ್ಹಿ ಜಿಲ್ಲೆಯು ಬರ್ಗಾನಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕುಮಾರ್ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
6 ತಿಂಗಳಿನಿಂದ ಪ್ರಿಯಕರ ರಾಜಾ ಜೈಲಿನಲ್ಲಿ ಇದ್ದಾನೆ. ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಶನಿವಾರ ಜೈಲಿನಿಂದ ಸೀತಾಮರ್ಹಿ ಕೋರ್ಟ್ಗೆ ಬಂದ ಪ್ರಿಯಕರ ರಾಜಕುಮಾರ್, ಆವರಣದ ಶಿವ ದೇವಾಲಯದಲ್ಲಿ ಅರ್ಚನಾ ಜತೆ ಸಪ್ತಪದಿ ತುಳಿದರು. ರಾಜಕುಮಾರ್ ನರ್ಕಟಿಯಾಗಂಜ್ ನಿವಾಸಿಯಾಗಿದ್ದರೆ, ಅರ್ಚನಾ ಸೀತಾಮರ್ಹಿಯ ಬರ್ಗಾನಿಯಾ ನಿವಾಸಿಯಾಗಿದ್ದರು. ಸೀತಾಮರ್ಹಿಯ ಜಿಲ್ಲೆಯ ಡುಮ್ರಾ ಕೋರ್ಟ್ ಆವರಣದ ಶಿವ ದೇವಾಲಯದಲ್ಲಿ ನ್ಯಾಯಾಧೀಶರ, ವಕೀಲರ ಸಮ್ಮುಖದಲ್ಲಿ ಪ್ರೇಮಿಗಳು ನವದಾಂಪತ್ಯಕ್ಕೆ ಪದಾರ್ಪಣೆ ಮಾಡಿದರು.
ರಾಜಕುಮಾರ್ ಅರ್ಚನಾ ಮದುವೆಗೆ ಕೋರ್ಟ್ ಅಸ್ತು :ಇಬ್ಬರು ಪ್ರೇಮಿಗಳು ಮದುವೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಇಬ್ಬರ ವಿವಾಹಕ್ಕೆ ಸಮ್ಮತಿ ನೀಡಿ ಆದೇಶಿಸಿತು. ನ್ಯಾಯಾಲಯದ ಆದೇಶದಂತೆ ಕೋರ್ಟ್ ಆವರಣದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ ಎನ್ನುತ್ತಾರೆ ಹುಡುಗಿಯ ಸಂಬಂಧಿಕರು. ನ್ಯಾಯಾಲಯದ ಆದೇಶದಂತೆ ಇಬ್ಬರೂ ಡುಮ್ರಾ ನ್ಯಾಯಾಲಯದ ಆವರಣದ ಶಿವನ ದೇವಸ್ಥಾನದಲ್ಲಿ ಮದುವೆ ನಡೆಯಿತು ಎಂದು ಹುಡುಗಿಯ ಸಹೋದರ ತಿಳಿಸಿದ್ದಾರೆ.