ಭುವನೇಶ್ವರ (ಓಡಿಶಾ) :ಇಲ್ಲಿನ ರಾಯಗಡ ಜಿಲ್ಲೆಯಲ್ಲಿ ನಡೆಯುತ್ತಿರುವ ಚಾಲಕರ ಮುಷ್ಕರದಿಂದಾಗಿ ವರ ಹಾಗೂ ಆತನ ಕುಟುಂಬಸ್ಥರು ವಧುವಿನ ಗ್ರಾಮಕ್ಕೆ 28 ಕಿಲೋ ಮೀಟರ್ ನಡೆದುಕೊಂಡು ಹೋಗಿದ್ದಾರೆ. ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಪಂಚಾಯಿತಿಯಿಂದ ಗುರುವಾರ ರಾತ್ರಿಯಿಡೀ ನಡೆದುಕೊಂಡು ದಿಬಳಪಾಡು ಗ್ರಾಮಕ್ಕೆ ಆಗಮಿಸಿ ಅಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇದನ್ನೂ ಓದಿ :ಗೋವಾ ಕಡಲ ತೀರದಲ್ಲಿ ಬಂಗಾಳಿ ಸಂಪ್ರದಾಯದಂತೆ ಮದುವೆಯಾದ ''ಯೇ ಹೇ ಮೊಹಬ್ಬತೇ ನಟಿ
ಮುಷ್ಕರದಿಂದ ಲಭ್ಯವಾಗದ ಸಾರಿಗೆ ವ್ಯವಸ್ಥೆ: ಕೆಲವು ಮಹಿಳೆಯರು ಸೇರಿದಂತೆ ವರ ಮತ್ತು ಅವರ ಕುಟುಂಬದ ಸದಸ್ಯರು ರಾತ್ರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. "ಚಾಲಕರ ಮುಷ್ಕರದಿಂದಾಗಿ ಯಾವುದೇ ಸಾರಿಗೆ ಲಭ್ಯವಿಲ್ಲ. ರಾತ್ರಿಯಿಡೀ ನಡೆದುಕೊಂಡು ಗ್ರಾಮಕ್ಕೆ ಬಂದೆವು. ನಮಗೆ ಬೇರೆ ದಾರಿಯೇ ಇರಲಿಲ್ಲ" ಎಂದು ವರನ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.
ವಧುವಿನ ಮನೆಯಲ್ಲಿಯೇ ಉಳಿದುಕೊಂಡಿರುವ ವರ: ಶುಕ್ರವಾರ ಬೆಳಗ್ಗೆ ಮದುವೆ ನಿಶ್ಚಯವಾಗಿತ್ತು. ಆದರೆ ವರ ಮತ್ತು ಆತನ ಕುಟುಂಬಸ್ಥರು ವಧುವಿನ ಮನೆಯಲ್ಲಿಯೇ ಉಳಿದುಕೊಂಡಿದ್ದು, ಚಾಲಕರ ಸಂಘದವರು ಮುಷ್ಕರ ಹಿಂಪಡೆಯುತ್ತಾರೆ ಎಂದು ಕಾಯುತ್ತಿದ್ದಾರೆ. ವಿಮೆ, ಪಿಂಚಣಿ, ಕಲ್ಯಾಣ ಮಂಡಳಿ ರಚನೆ ಮತ್ತಿತರ ಸಮಾಜ ಕಲ್ಯಾಣ ಕ್ರಮಗಳಿಗೆ ಆಗ್ರಹಿಸಿ ಚಾಲಕ ಏಕತಾ ಮಹಾಸಂಘ ಬುಧವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ.