ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕುವುದು ದೇಶಭಕ್ತಿಯ ಶ್ರೇಷ್ಠ ಕಾರ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ತಮ್ಮ ಚುನಾವಣಾ ಕ್ಷೇತ್ರವಾದ ನವದೆಹಲಿಯಲ್ಲಿ ಪಕ್ಷದ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್, ಕೇಸರಿ ಪಕ್ಷ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
"ನಮ್ಮ ಪಕ್ಷದ ಸ್ವಯಂಸೇವಕರು ಯಾರೂ ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ಆದರೂ ನನ್ನ ಕ್ಷೇತ್ರದ ಜನರು ಸ್ವಯಂಸೇವಕರ ಕಾರ್ಯಕ್ಕೆ ಅವರನ್ನು ಶ್ಲಾಘಿಸುತ್ತಾರೆ. ನಮ್ಮ ಪಕ್ಷ ಕೂಡ ರಾಜಕೀಯ ಹಿನ್ನೆಲೆ ಹೊಂದಿರುವ ಪಕ್ಷ ಅಲ್ಲ. ನಾನೂ, ಮನೀಶ್ ಸಿಸೋಡಿಯಾ ಸೇರಿದಂತೆ ಎಎಪಿಯ ಹಿರಿಯ ನಾಯಕರು ಕೂಡ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ನಾವೆಲ್ಲರೂ ಆಮ್ ಆದ್ಮಿ. ಇತರ ಪಕ್ಷಗಳ ರಾಜಕಾರಣಿಗಳು ಸಾಮಾನ್ಯವಾಗಿ ಗೂಂಡಾಗಿರಿ ಮಾಡುವುದನ್ನು ನೋಡುತ್ತಿದ್ದರೆ, ಆಪ್ನವರು ಸಭ್ಯರಾಗಿರುವುದರಿಂದ ಜನರು ಇಷ್ಟಪಡುತ್ತಿದ್ದಾರೆ. ಇದು ಆಪ್ನ ಟ್ರೇಡ್ಮಾರ್ಕ್." ಎಂದು ಹೇಳಿದರು.
"ಬಿಜೆಪಿ ಎರಡನೇ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ದೇಶವನ್ನು ಪ್ರಗತಿ ಪಥದತ್ತ ಮುನ್ನಡೆಸಬಹುದಿತ್ತು. ಆದರೆ, ಬಿಜೆಪಿ ಅದನ್ನು ಮಾಡಲಿಲ್ಲ. ಇಂದು ನಾವು ನೋಡಿದರೆ, ದೇಶದ ವಾತಾವರಣ ಎಲ್ಲ ಕಡೆ ಹದಗೆಟ್ಟಿದೆ. ಇಂತಹ ತೀವ್ರವಾದ ಧ್ರುವೀಕರಣ ಸಮಾಜದಲ್ಲಿ ಎಂದಿಗೂ ಕಂಡು ಬಂದಿಲ್ಲ. ಇಷ್ಟು ಹೊಡೆದಾಟ, ಹಿಂಸಾಚಾರ, ಭ್ರಷ್ಟಾಚಾರ ಹಾಗೂ ಲೂಟಿಯನ್ನು ಹಿಂದೆಂದೂ ನೋಡಿರಲಿಲ್ಲ. ಎಲ್ಲಿಯೂ ಶಾಂತಿ ಇಲ್ಲ."
ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ದೇಶಪ್ರೇಮದ ಅತಿದೊಡ್ಡ ಕಾರ್ಯವಾಗಲಿದೆ. ಆಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ. ಬಿಜೆಪಿಯವರು ತೆಗೆದುಕೊಂಡ ನಿರ್ಧಾರಗಳು ಯಾಕೆ ತೆಗೆದುಕೊಂಡಿದ್ದಾರೆ ಎನ್ನುವುದು ಯಾರಿಗೂ ಅರ್ಥವಾಗುವುದಿಲ್ಲ. 2016ರ ನೋಟು ಅಮಾನ್ಯೀಕರಣದಿಂದಾಗಿ ದೇಶದ ಆರ್ಥಿಕತೆ ಕನಿಷ್ಠ 10 ವರ್ಷಗಳ ಹಿಂದೆ ಹೋಗಿದೆ. ಅಷ್ಟೇ ಅಲ್ಲ, ಕಾರ್ಖಾನೆಗಳು ಮುಚ್ಚಿದವು, ವ್ಯವಹಾರಗಳು ಕಡಿಮೆಯಾಗಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ" ಎಂದು ಆರೋಪಿಸಿದರು.