ಮುಂಬೈ (ಮಹಾರಾಷ್ಟ್ರ): ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಅವರ ಗಾತ್ರದ ಪ್ರತಿಮೆಯನ್ನು ಇಂದು ಅನಾವರಣಗೊಳಿಸಲಾಯಿತು. ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಪ್ರತಿಮೆ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಇಡೀ ಕುಟುಂಬದೊಂದಿಗೆ ಉಪಸ್ಥಿತರಿದ್ದರು.
22 ಅಡಿ ಎತ್ತರ: ಮುಂಬೈ ಕ್ರಿಕೆಟ್ ಸಂಸ್ಥೆಯು ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್ ಪಕ್ಕದಲ್ಲಿ ಈ ಭವ್ಯವಾದ ಪ್ರತಿಮೆ ಸ್ಥಾಪಿಸಿದೆ. ಈ ಪ್ರತಿಮೆಯ ಎತ್ತರ ಸುಮಾರು 22 ಅಡಿ. ಉದ್ಘಾಟನಾ ಸಮಾರಂಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಿಸಿಸಿಐ ಖಜಾಂಚಿ ಆಶಿಶ್ ಶೇಲಾರ್ ಮತ್ತು ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ ಉಪಸ್ಥಿತರಿದ್ದರು.
ವಾಂಖೆಡೆ ಕ್ರೀಡಾಂಗಣ ಸಚಿನ್ ಅವರ ತವರು ಮೈದಾನ: ಸಚಿನ್ ಈ ವರ್ಷ 50 ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಆದ್ದರಿಂದ ಈ ವರ್ಷದ ಆರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಗೌರವಿಸಲು ಮುಂಬೈ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ. ವಾಂಖೆಡೆ ಸ್ಟೇಡಿಯಂ ಸಚಿನ್ ಅವರ ಹೋಮ್ ಗ್ರೌಂಡ್ ಆಗಿರುವುದರಿಂದ ಈ ಸ್ಟೇಡಿಯಂನಲ್ಲಿ ಸಚಿನ್ ಅವರ ಭವ್ಯ ಪ್ರತಿಮೆ ಸ್ಥಾಪಿಸಬೇಕು ಎಂದು ಎಂಸಿಎ ನಿರ್ಧರಿಸಿದೆ.