ನವದೆಹಲಿ: ದೇಶದಲ್ಲಿ ಮೂರನೇ ಕೋವಿಡ್ ಅಲೆ ಪ್ರಕರಣ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿರುವ ಕಾರಣ ಇದೀಗ ಅಂತಾರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಪರಿಷ್ಕರಣೆ ಮಾಡಿದ್ದು, ಇದೀಗ ಹೊಸ ಪ್ರಕಟಣೆ ಹೊರಡಿಸಿದೆ.
ಹೊಸ ಮಾರ್ಗಸೂಚಿ ಫೆಬ್ರವರಿ 14ರಿಂದ ಜಾರಿಗೊಳ್ಳಲಿದ್ದು, ಹೊಸ ಮಾರ್ಗಸೂಚಿಗಳ ಪ್ರಕಾರ ವಿದೇಶಿ ಪ್ರಯಾಣಿಕರು ವಿಮಾನಗಳಲ್ಲಿ ಪ್ರಯಾಣಿಸಲು ಆರ್ಟಿ-ಪಿಸಿಆರ್ ಹಾಗೂ ಕ್ವಾರಂಟೈನ್ ಕಡ್ಡಾಯವಲ್ಲ ಎಂದು ತಿಳಿಸಿದೆ. ಆದರೆ, ರೋಗ ಲಕ್ಷಣ ಕಾಣಿಸಿಕೊಂಡಿರುವವರು 14 ದಿನಗಳ ಕಾಲ ಸ್ವಯಂ ನಿರ್ಬಂಧಕ್ಕೆ ಒಳಗಾಗಬೇಕು ಎಂದು ಸೂಚಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಮಾರ್ಗಸೂಚಿ ಹೊರಡಿಸಿದ್ದು, ತಾವು ಪ್ರಯಾಣ ಬೆಳೆಸಿದ 72 ಗಂಟೆಗಳ ಒಳಗೆ ಕೋವಿಡ್ ಆರ್ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಅಪ್ಲೋಡ್ ಮಾಡಬೇಕು. ಇದರ ಜೊತೆಗೆ ಕೋವಿಡ್ ವ್ಯಾಕ್ಸಿನ್ನ ಎರಡು ಡೋಸ್ ಪಡೆದುಕೊಂಡಿರುವ ಬಗ್ಗೆ ಪ್ರಮಾಣ ಪತ್ರ ಸಹ ಅಪ್ಲೋಡ್ ಮಾಡುವಂತೆ ತಿಳಿಸಿದೆ. ಇದಕ್ಕಾಗಿ ಏರ್ ಸುವಿಧಾ ವೆಬ್ ಪೋರ್ಟಲ್ ಓಪನ್ ಮಾಡಿದೆ.
ಇದನ್ನೂ ಓದಿರಿ:ಪ್ರೇಮಿಗಳ ದಿನಕ್ಕೆ ಕೆಲ ದಿನ ಬಾಕಿ... ಮರಕ್ಕೆ ನೇಣು ಬಿಗಿದು ಯುವ ಜೋಡಿ ಆತ್ಮಹತ್ಯೆ!
ಅಪಾಯದಲ್ಲಿರುವ ರಾಷ್ಟ್ರಗಳು ಮತ್ತು ಇತರೆ ರಾಷ್ಟ್ರಗಳ ನಡುವಿನ ಪ್ರತ್ಯೇಕತೆ ತೆಗೆದು ಹಾಕಲಾಗಿದ್ದು, ಯಾವುದೇ ದೇಶದಿಂದ ಬಂದರೂ ಕೂಡ 14 ದಿನಗಳ ಕಾಲ ಸ್ವಯಂ ನಿಗಾ ವಹಿಸಬೇಕು ಎಂದು ತಿಳಿಸಿದೆ. ಪ್ರಮುಖವಾಗಿ ಕೆನಡಾ, ಹಾಂಗ್ ಕಾಂಗ್, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಬಹ್ರೇನ್, ಕತಾರ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಸೇರಿ ಒಟ್ಟು 82 ದೇಶಗಳಿಂದ ಬರುವವರಿಗೆ ಈ ಆಯ್ಕೆ ಸೌಲಭ್ಯ ನೀಡಲಾಗಿದೆ.