ನವದೆಹಲಿ:ಪ್ರಸ್ತುತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸಿದ್ದ ಅಬಕಾರಿ ಸುಂಕ ಸಂಗ್ರಹವು ಶೇಕಡಾ 48ರಷ್ಟು ಏರಿಕೆ ಕಂಡಿದೆ ಎಂದು ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.
ಅಬಕಾರಿ ಸುಂಕ ಶೇಕಡಾ 48ರಷ್ಟು ಏರಿಕೆ ಕಂಡಿರುವುದರ ಜೊತೆಗೆ ಪೂರ್ಣ ಆರ್ಥಿಕ ವರ್ಷದಲ್ಲಿ ತೈಲ ಬಾಂಡ್ ಮೇಲೆ ಮರುಪಾವತಿ ಸಾಮರ್ಥ್ಯ ಮೂರು ಪಟ್ಟು ಹೆಚ್ಚಾಗಿದೆ.
ಕೇಂದ್ರ ಹಣಕಾಸು ಸಚಿವಾಲಯದ ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ನಲ್ಲಿ ಈ ಮಾಹಿತಿ ನೀಡಿದ್ದು, 2021ರ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳು ಅಂದರೆ ಏಪ್ರಿಲ್ನಿಂದ ಜುಲೈವರೆಗಿನ ಅಬಕಾರಿ ಸುಂಕ ಸಂಗ್ರಹಣೆ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿದೆ ಎಂಬ ಅಂಕಿಅಂಶಗಳು ವರದಿಯಲ್ಲಿದೆ.
ಈ ಹಿಂದಿನ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಅಬಕಾರಿ ಸುಂಕ ಸಂಗ್ರಹ ತುಂಬಾ ಕಡಿಮೆಯಿತ್ತು. ಆಗ ಕೇವಲ 67,895 ಕೋಟಿ ರೂಪಾಯಿ ಮಾತ್ರ ಅಬಕಾರಿ ಸುಂಕ ಸಂಗ್ರಹವಾಗಿತ್ತು ಎಂದು ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಹೇಳಿದೆ.
ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪರಿಚಯಿಸಿದ ನಂತರ, ಪೆಟ್ರೋಲ್, ಡೀಸೆಲ್, ಎಟಿಎಫ್ (ATF- Alcohol, Tobacco, Firearms) ಮತ್ತು ನೈಸರ್ಗಿಕ ಅನಿಲದ ಮೇಲೆ ಮಾತ್ರ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಉಳಿದೆಲ್ಲಾ ಸರಕು ಮತ್ತು ಸೇವೆಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲಾಗಿದೆ.
ಮೊದಲೇ ಹೇಳಿದಂತೆ, ಶೇಕಡಾ 48ರಷ್ಟು ಅಬಕಾರಿ ಸುಂಕ ಸಂಗ್ರಹ ಹೆಚ್ಚಿದೆ. ಅಂದರೆ ಸುಮಾರು 32,492 ಕೋಟಿ ರೂಪಾಯಿಗಳು. ಪ್ರತಿ ವರ್ಷ ತೈಲ ಬಾಂಡ್ಗಳ ಮೇಲೆ 10 ಸಾವಿರ ಕೋಟಿ ರೂ ಮರುಪಾವತಿ ಮಾಡಬೇಕಿದ್ದು, ಈಗ ಸಂಗ್ರಹವಾಗಿರುವ ಹೆಚ್ಚಿನ ಅಬಕಾರಿ ಸುಂಕ ಸಂಗ್ರಹ, ಬಾಂಡ್ನ ಮರುಪಾವತಿ ಮೌಲ್ಯಕ್ಕಿಂತ ಮೂರು ಪಟ್ಟು ಹೆಚ್ಚಿದೆ.
ಈ ತೈಲ ಬಾಂಡ್‌ಗಳನ್ನು ಕಾಂಗ್ರೆಸ್ನ ನೇತೃತ್ವದ ಯುಪಿಎ ಸರ್ಕಾರ ಇಂಧನಕ್ಕೆ ಸಬ್ಸಿಡಿ ನೀಡಲು ವಿತರಣೆ ಮಾಡಿತ್ತು. ಸುಮಾರು 1.34 ಲಕ್ಷ ಕೋಟಿ ರೂ ಮೌಲ್ಯದ ಬಾಂಡ್‌ಗಳನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಅಡುಗೆ ಅನಿಲ, ಸೀಮೆಎಣ್ಣೆ ಮತ್ತು ಡೀಸೆಲ್‌ಗಳಂತಹ ಇಂಧನಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಸಲುವಾಗಿ ನೀಡಲಾಗಿತ್ತು.
ಮೊದಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಂತರ ಸಚಿವ ಹರ್ದೀಪ್ ಸಿಂಗ್ ಪುರಿ ತೈಲ ಬಾಂಡ್‌ಗಳಿಗೆ ಹಣ ಮರುಪಾವತಿಯನ್ನು ಸೀಮಿತಗೊಳಿಸಿದ ಕಾರಣದಿಂದಾಗಿ ಇಂಧನ ಬೆಲೆಗಳಲ್ಲಿ ಮಟ್ಟಿಗೆ ಏರಿಕೆ ಕಂಡಿತ್ತು. ರಾಹುಲ್ ಗಾಂಧಿ ಸೆಪ್ಟೆಂಬರ್ 2ರಂದು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅಂತಾರಾಷ್ಟ್ರೀಯ ಮಟ್ಟದ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 77 ಡಾಲರ್‌ನಿಂದ 65 ಡಾಲರ್‌ಗಳಿಗೆ ಇಳಿಕೆಯಾದಾಗ ದರಗಳನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿರಲಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಈ ವೇಳೆ ಪೆಟ್ರೋಲ್ ದರವನ್ನು 101.84 ರೂಪಾಯಿಯಿಂದ 101.19 ರೂಪಾಯಿಗೆ ಇಳಿಸಲಾಗಿತ್ತು. ಡೀಸೆಲ್ ಬೆಲೆಯನ್ನು 89.87 ರೂಪಾಯಿಯಿಂದ 88.62 ರೂಪಾಯಿಗೆ ಇಳಿಕೆಯಾಗಿದೆ.
ಜುಲೈನಿಂದ ಎಲ್‌ಪಿಜಿ ದರವನ್ನು ಪ್ರತಿ ಸಿಲಿಂಡರ್‌ಗೆ 190 ರೂಪಾಯಿ ಏರಿಕೆಯಾಗಿದೆ. ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಮುಂದಿನ ವರ್ಷ ನಡೆಯುವ ಹಿನ್ನೆಲೆಯಲ್ಲಿ ದರಗಳ 'ಏರಿಕೆ ಹೆಚ್ಚು' ಮಾಡಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಅಂದರೆ ವೆಚ್ಚಕ್ಕೆ ಬೆಲೆಯನ್ನು ಸರ್ಕಾರ ಏರಿಸಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.