ನವದೆಹಲಿ : ದೇಶದಲ್ಲಿ ಕೋವಿಡ್ ಲಸಿಕೆ ಕೊರತೆ ಇರುವಾಗ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರ ಎಲ್ಲಾ ವಯೋಮಾನದವರಿಗೆ ಲಸಿಕೆ ನೀಡುವುದಾಗಿ ಘೋಷಿಸಿದೆ ಎಂದು ಪುಣೆಯ ಸೆರಂ ಇನ್ಸ್ಟ್ಯೂಟ್ ಆಫ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ಸುರೇಶ್ ಜಾಧವ್ ಆರೋಪಿಸಿದ್ದಾರೆ.
ಹೀಲ್ ಹೆಲ್ತ್, ಹೆಲ್ತ್ ಅಡ್ವೊಕೆಸಿ ಮತ್ತು ಜಾಗೃತಿ ವೇದಿಕೆ ಆಯೋಜಿಸಿದ್ದ ಇ-ಶೃಂಗಸಭೆಯಲ್ಲಿ ಮಾತನಾಡಿದ ಜಾಧವ್, ದೇಶದಲ್ಲಿ ಡಬ್ಲ್ಯುಹೆಚ್‌ಒ ಮಾರ್ಗಸೂಚಿಗಳನ್ನು ಪಾಲಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಲಸಿಕೆ ನೀಡಬೇಕು ಎಂದಿದ್ದಾರೆ.
ಓದಿ : 'ಕ್ಯಾ'ಸ್ಪಿಟಲ್ಗಳಿಗೆ ಮೂಗುದಾರ ಹಾಕಲು ಇದು ಸುಸಮಯ...
ಆರಂಭದಲ್ಲಿ, 300 ಮಿಲಿಯನ್ ಜನರಿಗೆ ಲಸಿಕೆ ನೀಡಬೇಕಾಗಿತ್ತು, ಇದಕ್ಕಾಗಿ 600 ಮಿಲಿಯನ್ ಡೋಸ್ ಅಗತ್ಯವಿತ್ತು. ಆದರೆ, ನಾವು ಗುರಿ ತಲುಪುವ ಮೊದಲೇ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಸರ್ಕಾರ ಲಸಿಕೆ ನೀಡಲು ಪ್ರಾರಂಭಿಸಿತು.
ಬಳಿಕ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೂ ಲಸಿಕೆ ನೀಡುವುದಾಗಿ ಘೋಷಿಸಿತು. ಲಸಿಕೆ ಕೊರತೆ ಇರುವ ಬಗ್ಗೆ ಗೊತ್ತಿದ್ದರೂ, ಸರ್ಕಾರ ಅದನ್ನು ಕಡೆಗಣಿಸಿ ಈ ರೀತಿ ನಿರ್ಧಾರ ತೆಗೆದುಕೊಂಡಿದೆ.
ಇದು ನಮಗೊಂದು ಪಾಠ. ನಾವು ಮೊದಲು ಉತ್ಪನ್ನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು, ಬಳಿಕ ಅದನ್ನು ನ್ಯಾಯಯುತವಾಗಿ ಬಳಸಬೇಕು ಎಂದು ಜಾಧವ್ ಹೇಳಿದ್ದಾರೆ.
ಲಸಿಕೆ ತೆಗೆದುಕೊಳ್ಳುವುದು ಅಗತ್ಯ. ಆದರೆ, ಲಸಿಕೆ ಪಡೆದ ಬಳಿಕವೂ ಜನರಿಗೆ ಸೋಂಕು ತಗುಲುತ್ತದೆ. ಆದ್ದರಿಂದ ಜಾಗರೂಕರಾಗಿರಿ, ಕೋವಿಡ್ ರೂಪಾಂತರಿ ತಳಿಗಳನ್ನು ಲಸಿಕೆ ತಡೆಯುತ್ತದೆ. ಆದರೂ, ಅದು ಹಾನಿ ಮಾಡುವ ಸಾಧ್ಯತೆಗಳಿರುತ್ತದೆ.