ಮುಂಬೈ: ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ವಿರುದ್ಧದ ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ (ಫೋನ್ ಟ್ಯಾಪಿಂಗ್) ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರಿಂದ ಸಿಬಿಐಗೆ ಹಸ್ತಾಂತರಿಸಲಾಗಿದೆ. ಇದರ ಜೊತೆಗೆ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯ ನಿಕಟವರ್ತಿಯಾಗಿರುವ ಗಿರೀಶ ಮಹಾಜನ ಆರೋಪಿಯಾಗಿರುವ ಮತ್ತೊಂದು ಪ್ರಕರಣವನ್ನು ಸಹ ಸಿಬಿಐಗೆ ವಹಿಸಲಾಗಿದೆ ಎಂದು ಗೃಹ ಇಲಾಖೆಯ ಪ್ರಕಟಣೆ ತಿಳಿಸಿದೆ.
ರಶ್ಮಿ ಶುಕ್ಲಾ ವಿರುದ್ಧ ಮಾರ್ಚ್ 26, 2021 ರಂದು ಮುಂಬೈ ಸೈಬರ್ ಸೆಲ್ ಎಫ್ಐಆರ್ ದಾಖಲಿಸಿತ್ತು. ಶುಕ್ಲಾ ಸಲ್ಲಿಸಿದ್ದ ರಹಸ್ಯ ವರದಿಯೊಂದನ್ನು ಸೋರಿಕೆ ಮಾಡಿದ್ದಕ್ಕಾಗಿ ಗುಪ್ತಚರ ಇಲಾಖೆಯ ಸಹಾಯಕ ಆಯುಕ್ತರು ಅಪರಿಚಿತ ವ್ಯಕ್ತಿಗಳ ವಿರುದ್ಧ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಎಫ್ಐಆರ್ ದಾಖಲಾಗಿತ್ತು. ತಮ್ಮ ರಾಜಕೀಯ ಸಂಪರ್ಕಗಳನ್ನು ಉಪಯೋಗಿಸಿಕೊಂಡು, ಹಣಕ್ಕಾಗಿ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆ ಮಾಡಿರುವ ಬಗ್ಗೆ ಕೆಲ ಖಾಸಗಿ ವ್ಯಕ್ತಿಗಳ ಮುಖ್ಯವಾದ ಮಾಹಿತಿ ಈ ಫೈಲ್ನಲ್ಲಿತ್ತು ಎನ್ನಲಾಗಿದೆ.