ನವದೆಹಲಿ:ದೇಶದಲ್ಲಿ ಗೋಧಿ ಮತ್ತು ಅದರ ಹಿಟ್ಟಿನ ಬೆಲೆ ಹೆಚ್ಚುತ್ತಿದೆ. ಬೆಲೆ ಏರಿಕೆಯನ್ನು ತಪ್ಪಿಸಲು ಕೇಂದ್ರ ಸರ್ಕಾರದ ದಾಸ್ತಾನಿನಲ್ಲಿರುವ 30 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆ ಯೋಜನೆಯಡಿ ಬಿಡುಗಡೆ ಮಾಡಲು ಮುಂದಾಗಿದೆ. ಈ ಬಗ್ಗೆ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮುಂದಿನ ಎರಡು ತಿಂಗಳೊಳಗೆ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಕೇಂದ್ರೀಯ ದಾಸ್ತಾನಿನಿಂದ 30 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ತರುವ ಮೂಲಕ ಗೋಧಿ ಮತ್ತು ಹಿಟ್ಟಿನ ಬೆಲೆಯಲ್ಲಾಗುವ ವ್ಯಾಪಕ ಪರಿಣಾಮವನ್ನು ತಡೆಯಬಹುದಾಗಿದೆ. ಏರುತ್ತಿರುವ ಬೆಲೆಯನ್ನೂ ನಿಯಂತ್ರಿಸಲು ಸಾಧ್ಯ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ದೇಶೀಯವಾಗಿ ಉತ್ಪಾದಿಸಲಾದ ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯನ್ನು ಇಳಿಸುವ ಸಲುವಾಗಿ ವ್ಯಾಪಾರಿಗಳು, ರಾಜ್ಯ ಸರ್ಕಾರ, ಸಹಕಾರಿ ಸಂಸ್ಥೆ, ಫೆಡರೇಶನ್‌ಗಳು ಮತ್ತು ಪಿಎಸ್‌ಯುಗಳ ಮೂಲಕ ಗೋಧಿ ಮಾರಾಟವನ್ನು ಹೆಚ್ಚಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇ-ಹರಾಜಿನ ಅಡಿಯಲ್ಲಿ ಎಫ್‌ಸಿಐ ವಲಯದಿಂದ ಪ್ರತಿ ಖರೀದಿದಾರರಿಗೆ ಗರಿಷ್ಠ 3,000 ಮೆಟ್ರಿಕ್ ಟನ್‌ಗಳಷ್ಟು ಹಿಟ್ಟು ಗಿರಣಿದಾರರು ಮತ್ತು ಬೃಹತ್ ಖರೀದಿದಾರರು, ಮತ್ತಿತರರಿಗೆ ನೀಡಲಾಗುವುದು ಗೋಧಿಯನ್ನು ಒದಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೇ, ಇ- ಹರಾಜು ರಹಿತವಾಗಿಯೂ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ತಮ್ಮ ಯೋಜನೆಗಳಿಗೆ ಈ ಗೋಧಿಯನ್ನು ಸಹ ಬಳಸಿಕೊಳ್ಳಬಹುದು ಎಂದು ತಿಳಿಸಿದೆ.
2350 ರೂಪಾಯಿ ರಿಯಾಯಿತ ದರದಲ್ಲಿ ಇ-ಹರಾಜು ಅಲ್ಲದೆಯೇ ಸರ್ಕಾರ ಸಾರ್ವಜನಿಕ ರಂಗದ ಉದ್ಯಮಗಳು, ಸಹಕಾರಿಗಳು, ಒಕ್ಕೂಟಗಳು, ಎನ್ಸಿಸಿಎಫ್, ನಾಫೆಡ್ಗಳಿಗೆ ಗೋಧಿ ಪೂರೈಸಲಾಗುವುದು. ಈ ವಿಶೇಷ ಮಾರಾಟದ ಖರೀದಿದಾರರು ಗೋಧಿಯನ್ನು ಹಿಟ್ಟು(ಹುಡಿ) ಮಾಡಿ ಅದನ್ನು ಪ್ರತಿ ಕೆಜಿಗೆ ಗರಿಷ್ಠ 29.50 ರೂಪಾಯಿಗೆ ಜನರಿಗೆ ಮಾರಾಟ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.