ನವದೆಹಲಿ:ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ದೇಶದ 81.35 ಕೋಟಿ ಬಡವರಿಗೆ ಒಂದು ವರ್ಷದವರೆಗೆ ಉಚಿತ ಪಡಿತರ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರತಿ ವ್ಯಕ್ತಿಗೆ 5 ಕೆ.ಜಿ ಆಹಾರ ಧಾನ್ಯಗಳನ್ನು ಈ ಕಾಯ್ದೆಯಡಿ ಕೇಂದ್ರ ಒದಗಿಸುತ್ತದೆ. ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಡಿಯಲ್ಲಿ ಬರುವ ಕುಟುಂಬಗಳು ಪ್ರತಿ ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳನ್ನು ಪಡೆಯಲಿವೆ. ಎನ್‌ಎಫ್‌ಎಸ್‌ಎ ಅಡಿಯಲ್ಲಿ ಬಡವರಿಗೆ ಒಂದು ಕೆಜಿ ಅಕ್ಕಿಯನ್ನು 3 ರೂ.ಗೆ ಮತ್ತು ಕೆಜಿ ಗೋಧಿಯನ್ನು 2 ರೂ. ಗೆ ನೀಡಲಾಗುತ್ತದೆ.
ಕೇಂದ್ರ ಸಚಿವ ಸಂಪುಟದ ನಿರ್ಧಾರದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಚಿವ ಪಿಯೂಷ್ ಗೋಯಲ್, ಎನ್‌ಎಫ್‌ಎಸ್‌ಎ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಸಂಪೂರ್ಣ ಹೊರೆಯನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಇದಕ್ಕಾಗಿ ವಾರ್ಷಿಕ 2 ಲಕ್ಷ ಕೋಟಿ ರೂ. ಖರ್ಚಾಗಲಿದೆ ಎಂದು ಹೇಳಿದರು.