ನವದೆಹಲಿ/ಬೆಂಗಳೂರು: ಕಾಫಿ ಬೆಳೆಗಾರರು ಸಾಲವನ್ನು ತೀರಿಸಲು ಸಾಧ್ಯವಾಗದಿದ್ದರೆ ತಮ್ಮ ಭೂಮಿಯನ್ನು ಕಳೆದುಕೊಳ್ಳದಂತೆ ಸರ್ಕಾರವು ಕಾಫಿ ಕಾಯ್ದೆಯನ್ನು ಸರಳಗೊಳಿಸುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದರು.
ಬೆಂಗಳೂರಿನ ಕಾಫಿ ಮಂಡಳಿ ಕೇಂದ್ರ ಕಚೇರಿಯಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕಾಫಿ ಬೆಳೆಗಾರರು, ರೋಸ್ಟರ್‌ಗಳು, ರಫ್ತುದಾರರು ಮತ್ತು ಇತರ ಪಾಲುದಾರರೊಂದಿಗೆ ಸಂವಾದ ನಡೆಸಿದರು. ಈ ವೇಳೆ, ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ (SARFAESI) ಕಾಯ್ದೆಯಡಿ ಬ್ಯಾಂಕ್ಗಳು ನೀಡಿರುವ ನೋಟಿಸ್‌ಗಳಿಂದ ಕಾಫಿ ಬೆಳೆಗಾರರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಸಚಿವರು, ಈ ಸಮಸ್ಯೆಗೆ ಸಂಬಂಧಿಸಿದಂತೆ ಇತರ ಸಚಿವಾಲಯಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಪ್ರಸ್ತುತ ಇರುವ ಕಾಫಿ ಕಾಯ್ದೆಯನ್ನು 1942ರಲ್ಲಿ ಜಾರಿಗೆ ತರಲಾಗಿದೆ. ಈ ಕಾಯ್ದೆಯು ಕಾಫಿ ವ್ಯಾಪಾರಕ್ಕೆ ಅಡ್ಡಿಯಾಗಿರುವ ಅನೇಕ ನಿಬಂಧನೆಗಳನ್ನು ಹೊಂದಿದೆ. ಆದ್ದರಿಂದ, ಕಾನೂನಿನ ನಿಬಂಧನೆಗಳನ್ನು ಸಂಪೂರ್ಣವಾಗಿ ಮರುಪರಿಶೀಲಿಸಲು ಮತ್ತು ಕಾಫಿ ಕ್ಷೇತ್ರದ ಪ್ರಸ್ತುತ ಅಗತ್ಯಗಳಿಗೆ ಸೂಕ್ತವಾದ, ಸರಳವಾದ ಕಾಯ್ದೆಯನ್ನು ತರಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ.
2004 ರಲ್ಲಿ, ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಸರ್ಫಾಸಿ (SARFAESI) ಕಾಯ್ದೆಯನ್ನು ಅಂಗೀಕರಿಸಿತ್ತು. ಈ ಕಾಯ್ದೆಯು, ಪಡೆದ ಸಾಲ ಹಿಂದಿರುಗಿಸದಿದ್ದರೆ ವ್ಯಕ್ತಿಯ ಚರ ಮತ್ತು ಸ್ಥಿರ ಆಸ್ತಿಯನ್ನು ವಶಪಡಿಸಿಕೊಳ್ಳಲು ಬ್ಯಾಂಕುಗಳಿಗೆ ಅಧಿಕಾರ ನೀಡಿತ್ತು. ಹೆಚ್ಚುತ್ತಿರುವ ಸರಕು ಶುಲ್ಕದಿಂದಾಗಿ ಭಾರತವು ತನ್ನ ಸಾಂಪ್ರದಾಯಿಕ ಕಾಫಿ ರಫ್ತು ಮಾರುಕಟ್ಟೆಯನ್ನು ಕಳೆದುಕೊಳ್ಳಬಹುದು ಎಂದು ಹಲವಾರು ರಫ್ತುದಾರರು ಕಳವಳ ವ್ಯಕ್ತಪಡಿಸಿದ್ದಾರೆ.