ನವದೆಹಲಿ:ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಇಂದು ಮಹತ್ವದ ಮೂರು ಮಸೂದೆಗಳನ್ನು ಮಂಡಿಸಿತು. ಬ್ರಿಟಿಷರ ಕಾಲದ ಕಾನೂನುಗಳನ್ನು ಬದಲಿಸುವ ಮಸೂದೆಗಳನ್ನು ಮಂಡಿಸಿದ ಗೃಹ ಸಚಿವ ಅಮಿತ್ ಶಾ, ಪ್ರಾಸ್ತಾವಿತ ಕಾನೂನುಗಳು ಕೇಂದ್ರದ ಹಂತದಲ್ಲಿ ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ಪರಿವರ್ತಿಸಲಿವೆ ಹಾಗು ಭಾರತೀಯ ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತವೆ ಎಂದು ಹೇಳಿದರು.
ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita - BNS) - 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (Bharatiya Nagarik Suraksha Sanhita - BNSS) - 2023 ಹಾಗೂ ಭಾರತೀಯ ಸಾಕ್ಷ್ಯ (Bharatiya Sakshya - BS) - 2023 ಮಸೂದೆಯನ್ನು ಅಮಿತ್ ಶಾ ಮಂಡಿಸಿದ್ದಾರೆ.
''ಈ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ (Indian Penal Code) - 1860, ಅಪರಾಧ ಪ್ರಕ್ರಿಯೆ ಕಾಯ್ದೆ (Criminal Procedure Act) - 1898 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ (Indian Evidence Act) - 1872ರ ಸ್ಥಾನವನ್ನು ತುಂಬುತ್ತವೆ. ಜನತೆಗೆ ತ್ವರಿತ ನ್ಯಾಯ ಒದಗಿಸಲು ಮತ್ತು ಜನರ ಸಮಕಾಲೀನ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಉಳಿಸಿಕೊಳ್ಳುವ ಕಾನೂನು ವ್ಯವಸ್ಥೆಯನ್ನು ರಚಿಸಲು ಈ ಬದಲಾವಣೆಗಳನ್ನು ಮಾಡಲಾಗಿದೆ'' ಎಂದು ಶಾ ವಿವರಿಸಿದರು.
''ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮಸೂದೆಯು ದೇಶದ್ರೋಹ ಕಾನೂನನ್ನು ರದ್ದುಗೊಳಿಸುತ್ತದೆ. ಗುಂಪು ಹತ್ಯೆ ಮತ್ತು ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರದಂತಹ ಅಪರಾಧಗಳಿಗೆ ಗರಿಷ್ಠ ಮರಣದಂಡನೆ ನೀಡುವ ನಿಬಂಧನೆಗಳನ್ನು ಹೊಂದಿದೆ. ಸಣ್ಣ ಅಪರಾಧಗಳಿಗೆ ಶಿಕ್ಷೆಗಳಲ್ಲೊಂದಾಗಿ ಮೊದಲ ಬಾರಿಗೆ ಸಮುದಾಯ ಸೇವೆಯನ್ನು ಒದಗಿಸುವ ನಿಬಂಧನೆಗಳನ್ನು ಈ ಮಸೂದೆ ಹೊಂದಿದೆ'' ಎಂದು ಗೃಹ ಸಚಿವರು ತಿಳಿಸಿದರು.