ನವದೆಹಲಿ:ಸುಪ್ರೀಂಕೋರ್ಟ್‌ಗೆ ತನ್ನ ಅಂತ್ಯವಿಲ್ಲದ ಮೇಲ್ಮನವಿಗಳೊಂದಿಗೆ 'ಓವರ್‌ಲೋಡ್' ಮಾಡುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅಭಿಪ್ರಾಯಪಟ್ಟಿದ್ದಾರೆ.
ಇಂದು ಸುಪ್ರೀಂಕೋರ್ಟ್‌ನಲ್ಲಿ ಆಚರಿಸಲಾದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ಅನ್ನು ಸಣ್ಣ ನ್ಯಾಯಾಲಯವನ್ನಾಗಿ ವರ್ತಿಸುವುದನ್ನು ನಿಲ್ಲಿಸಬೇಕು. ಹೈಕೋರ್ಟ್‌ಗಳಿಂದ ತಡೆರಹಿತ ಮತ್ತು ದೊಡ್ಡ ಪ್ರಮಾಣದ ಪ್ರಕರಣಗಳ ಜೊತೆಗೆ ಕೊನೆಯಿಲ್ಲದ ಶಾಸನಬದ್ಧ ಮೇಲ್ಮನವಿಗಳೊಂದಿಗೆ ಸುಪ್ರೀಂ ಕೋರ್ಟ್ಗೆ ಓವರ್‌ಲೋಡ್ ಮಾಡುವುದನ್ನು ಸರ್ಕಾರ ನಿಲ್ಲಿಸುವುದು ಮುಖ್ಯವಾಗಿದೆ ಎಂದು ಪ್ರತಿಪಾದಿಸಿದರು.
ಎಲ್ಲ ಇಲಾಖೆಗಳು ಪರಿಹಾರ ವಿಭಾಗವನ್ನು ಹೊಂದಿರಬೇಕು ಮತ್ತು ಅವುಗಳನ್ನು ಯಾವಾಗಲೂ ಕಾನೂನು ವಿವಾದಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ. ನಮಗೆ ಕಾನೂನು ಸುಧಾರಣಾ ವಿಭಾಗ, ಸಂಶೋಧನಾ ವಿಭಾಗ, ಶೈಕ್ಷಣಿಕ ವಿಭಾಗಕ್ಕೆ ಶಾಶ್ವತ ಕಾನೂನು ಆಯೋಗದ ಅಗತ್ಯವಿದೆ. ನಾವು ನಮ್ಮ ಹೈಕೋರ್ಟ್‌ಗಳ ದಟ್ಟಣೆ ಕಡಿಮೆಗೊಳಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಇದೇ ವೇಳೆ, ಪಶ್ಚಿಮವು ನಮ್ಮಿಂದ ಕಲಿಯಲು ಬರುವ ದಿನಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ. ವಸಾಹತುಶಾಹಿ ಮನಸ್ಸುಗಳು ಮತ್ತು ಜನರು ಸ್ವತಂತ್ರರಾಗಬೇಕಿದೆ ಎಂದು ಅಟಾರ್ನಿ ಜನರಲ್ ಹೇಳಿದರು.
ಭಾರತೀಯ ಭಾಷಾ ಸಮಿತಿ ರಚನೆ: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಾತನಾಡಿ, ಕಾನೂನಿನ ಬಗ್ಗೆ ಎಲ್ಲ ನಾಗರಿಕರಿಗೆ ಮಾಹಿತಿ ಲಭ್ಯವಾಗುವಂತೆ ತಂತ್ರಜ್ಞಾನ ಮತ್ತು ನ್ಯಾಯಾಂಗವನ್ನು ಸಂಯೋಜಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಟೆಲಿ ಕಾನೂನು ಸೇವೆಗಳ ಮೂಲಕ ವ್ಯಾಜ್ಯ ಪೂರ್ವ ಮಾಹಿತಿ ಲಭ್ಯವಾಗುತ್ತಿದ್ದು, 25 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಒಂದು ಕೋಟಿ ಜನರಿಗೆ ಇದರ ಮಾಹಿತಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದರು.