ನವದೆಹಲಿ: ದೇಶಾದ್ಯಂತ ಸುಮಾರು 50 ಲಕ್ಷ ಬೀಡಿ ಕಾರ್ಮಿಕರ ಕುಟುಂಬಗಳಿಗೆ ಕೇಂದ್ರವು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ನೀಡುತ್ತಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಇಂದು ಲೋಕಸಭೆಗೆ ತಿಳಿಸಿದರು. ಈ ಯೋಜನೆಗಳ ಮೂಲಕ ಆರೋಗ್ಯ ಸೌಲಭ್ಯ, ವಿದ್ಯಾರ್ಥಿವೇತನ ಮತ್ತು ವಸತಿ ಅನುಕೂಲ ಸಿಗುತ್ತಿದೆ ಎಂದು ಅವರು ವಿವರಿಸಿದರು.
ಕಾರ್ಮಿಕ ಯೋಜನೆಯಡಿ ದೇಶಾದ್ಯಂತ ಇರುವ 285 ಔಷಧಾಲಯಗಳು ಮತ್ತು 10 ಆಸ್ಪತ್ರೆಗಳ ಮೂಲಕ ಬೀಡಿ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ ಸಿಗುತ್ತಿದೆ. ದೇಶದಲ್ಲಿ 49.82 ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ಇವರಲ್ಲಿ 18.29 ಲಕ್ಷ ಜನರು ಪಶ್ಚಿಮ ಬಂಗಾಳಕ್ಕೆ ಸೇರಿದವರಾಗಿದ್ದಾರೆ ಎಂದು ಸಚಿವರು ಹೇಳಿದರು.
ಆರೋಗ್ಯ ಸೌಲಭ್ಯಗಳೇನು?: ಕ್ಯಾನ್ಸರ್, ಕ್ಷಯ, ಹೃದ್ರೋಗ, ಕಿಡ್ನಿ ಕಸಿ, ಅಂಡವಾಯು, ಅಪೆಂಡೆಕ್ಟಮಿ, ಅಲ್ಸರ್, ಸ್ತ್ರೀರೋಗ ಮತ್ತು ಪ್ರಾಸ್ಟ್ರೇಟ್‌ನಂತಹ ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸೆಗಾಗಿ ವೆಚ್ಚವನ್ನು ಸರ್ಕಾರ ಫಲಾನುಭವಿಗಳಿಗೆ ಮರುಪಾವತಿಸುತ್ತದೆ. ಈ ಯೋಜನೆಯು ಪುರುಷ ಮತ್ತು ಮಹಿಳಾ ಬೀಡಿ ಕಾರ್ಮಿಕರನ್ನು ಒಳಗೊಂಡಿದೆ.