ಪಾಣಿಪತ್ (ಹರಿಯಾಣ): ಸುಮಾರು ಎರಡೂವರೆ ವರ್ಷಗಳ ಹಿಂದೆ ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಆ ಸಂತ್ರಸ್ತ ಮಹಿಳೆಗೆ ಅಧಿಕಾರಿಗಳು ಸಹಾಯ ಮಾಡುವ ಬದಲು ಮತ್ತಷ್ಟು ಕಷ್ಟ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆಸಿಡ್ ದಾಳಿಯಾದ ನಂತರ ಆ ಮಹಿಳೆ ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದರು. ಕೆಲಸಕ್ಕೆ ಹೋಗುವುದು ಕೂಡ ಆಕೆಗೆ ಕಷ್ಟವಾಗಿತ್ತು. ಮುಖ ವಿರೂಪಗೊಂಡು, ಆಕೆ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಈಗ ಸರ್ಕಾರ ಕೂಡ ಮಹಿಳೆಯ ಕುಟುಂಬಕ್ಕೆ ಅಗತ್ಯವಿರುವ ಪ್ರಯೋಜನಗಳನ್ನು ನೀಡದೆ ಸತಾಯಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
2020ರ ಪಾಣಿಪತ್ ಆ್ಯಸಿಡ್ ದಾಳಿ ಪ್ರಕರಣದ ಸಂತ್ರಸ್ತ ಮಹಿಳೆ ಕುಟುಂಬವನ್ನು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿದೆ) ನಿಂದ ಕೈಬಿಡಲಾಗಿದೆ. ಅದರ ಅಡಿ ಬರುವ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಆಕೆಗೆ ನೀಡುವುದನ್ನು ನಿಲ್ಲಿಸಲಾಗಿದೆ. ಮಹಿಳೆಯ ಪತಿ ಕಾರ್ಖಾನೆಯ ಕೆಲಸಗಾರ, ತಿಂಗಳಿಗೆ ಕೇವಲ 13,000 ರೂಪಾಯಿಗಳನ್ನು ಪಡೆಯುತ್ತಾರೆ. ಆದರೆ, ಅವರ ಆದಾಯವನ್ನು 25,000 ರೂಪಾಯಿ ಎಂದು ತಪ್ಪಾಗಿ ನಮೂದಿಸಿರುವುದು ಬಿಪಿಎಲ್ ಪ್ರಯೋಜನಗಳಿಂದ ಅವರನ್ನು ಅನರ್ಹಗೊಳಿಸಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಇವತ್ತಿಗೂ ಅವರ ಕುಟುಂಬದ ರೇಷನ್ ಕಾರ್ಡ್ನಲ್ಲಿ ಮಹಿಳೆಯ ಆದಾಯವನ್ನು ತಿಂಗಳಿಗೆ 10 ಸಾವಿರ ಎಂದು ನಮೂದಿಸಲಾಗಿದೆ. ಕಾರ್ಖಾನೆಯಲ್ಲಿ 12 ಸಾವಿರ ರೂ.ಗೆ ಕೂಲಿ ಕೆಲಸ ಮಾಡುವ ಅವರ ಪತಿಯ ಆದಾಯವನ್ನು ತಿಂಗಳಿಗೆ 25 ಸಾವಿರ ಎಂದು ತಪ್ಪಾಗಿ ಬರೆಯಲಾಗಿದೆ. ಸರ್ಕಾರ ಮಾಡಿದ ಈ ತಪ್ಪುಗಳಿಂದ ಆ್ಯಸಿಡ್ ದಾಳಿಗೊಳಗಾದ ಮಹಿಳೆ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅದಲ್ಲದೇ ಆರೋಗ್ಯ ಇಲಾಖೆ ಮಹಿಳೆಯನ್ನು ಶೇಕಡಾ 63 ರವರೆಗೆ ವಿಕಲಚೇತನರು ಎಂದು ಪ್ರಮಾಣೀಕರಿಸಿದೆ.
ಆಕೆಗೆ ಬರಬೇಕಿರುವ ಪಿಂಚಣಿಯನ್ನೂ ಕೂಡ ಇಲಾಖೆ ನೀಡಿಲ್ಲ. ಈ ಪಿಂಚಣಿಗಾಗಿ ಮಹಿಳೆ ಕಚೇರಿಗೆ ಅಲೆದಾಡಿ ಸಾಕಾಗಿ ಮನೆಯಲ್ಲಿ ಕುಳಿತಿದ್ದಾರೆ. ಇಲ್ಲಿಯವರೆಗೆ ಸರ್ಕಾರ ಮಹಿಳೆಗೆ ಕೇವಲ 3 ಲಕ್ಷ ರೂ ಅಷ್ಟೆ ಸಹಾಯಧನ ನೀಡಿದೆ. ಸಂತ್ರಸ್ತ ಮಹಿಳೆ ಹೇಳುವಂತೆ ತನ್ನ ಮೇಲೆ ಆ್ಯಸಿಡ್ ದಾಳಿಗೂ ಮುನ್ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಹೊಲಿಗೆ ಯಂತ್ರದಲ್ಲಿ ಕೈಮಗ್ಗದ ಕೆಲಸವನ್ನೂ ಮಾಡುತ್ತಿದ್ದೆ. ಇದರಿಂದ ಆಕೆ ತಿಂಗಳಿಗೆ 10 ರಿಂದ 15 ಸಾವಿರ ರೂ. ವರೆಗೆ ದುಡಿಯುತ್ತಿದ್ದರು.