ನವದೆಹಲಿ: ಪೆಗಾಸಸ್ ಹ್ಯಾಕಿಂಗ್ ಆರೋಪ ಸಂಬಂಧದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಡುವೆ ಮಾತಿನ ಚಕಮಕಿ ನಡೆದಿದೆ. ಸಂಸತ್ ಮುಂಗಾರು ಅಧಿವೇಶನ ಸುಗಮವಾಗಿ ನಡೆಸುತ್ತಿಲ್ಲ ಎಂದು ರಾಹುಲ್ ಸರ್ಕಾರವನ್ನು ದೂಷಿಸಿದರೆ, ಕೇಂದ್ರ ಸಚಿವರು ಇದನ್ನು ನಿರಾಕರಿಸಿದ್ದಾರೆ.
ರಾಹುಲ್ ಗಾಂಧಿ ಈ ಬಗ್ಗೆ ಟ್ವೀಟ್ ಮಾಡಿದ್ದು, ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸಬೇಕು. ಸಮಯ ವ್ಯರ್ಥ ಮಾಡದೆ ಪೆಗಾಸಸ್ ಬಗ್ಗೆ ಚರ್ಚಿಸಲು ಒತ್ತಾಯಿಸಿದರು. ಹೆಚ್ಚುತ್ತಿರುವ ಬೆಲೆಗಳು, ರೈತರ ಸಮಸ್ಯೆಗಳನ್ನು ಚರ್ಚಿಸಬೇಕು ಎಂದಿದ್ದಾರೆ.
ಸಂಸತ್ತಿನ ಸದಸ್ಯರಾದ ನಾವು ಸದನದಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ದೇಶದ ಪ್ರಮುಖ ವಿಷಯಗಳ ಬಗ್ಗೆ ನಾವು ಚರ್ಚಿಸಬೇಕಾಗಿದೆ. ಇದು ನಮ್ಮ ಪ್ರಜಾಪ್ರಭುತ್ವದ ಅಡಿಪಾಯ. ಸಂಸತ್ತಿನಲ್ಲಿ ಸಮಯ ವ್ಯರ್ಥ ಮಾಡಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರ ಪೆಗಾಸಸ್ ಸ್ಪೈವೇರ್ ಖರೀದಿಸಿದೆಯೋ ಇಲ್ಲವೋ ಎಂದು ಸ್ಪಷ್ಟಪಡಿಸಲಿ: ರಾಹುಲ್ ಗಾಂಧಿ
ರಾಹುಲ್ ಅವರ ವರ್ತನೆಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಮುಖ್ಯತೆ ಇಲ್ಲದ ವಿಷಯವನ್ನು ಇಟ್ಟುಕೊಂಡು ಸಮಸ್ಯೆಯಾಗಿ ಬಿಂಬಿಸುತ್ತಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ. ಸದನ ಸುಗಮವಾಗಿ ನಡೆಯುವುದನ್ನು ಕೇಂದ್ರ ಬಯಸುವುದಿಲ್ಲ ಎಂದು ಹೇಳುವುದು ನ್ಯಾಯವಲ್ಲ. ಪ್ರಪಂಚದಾದ್ಯಂತದ ಸಾವಿರಾರು ಜನರ ಕಣ್ಗಾವಲು? ರಾಹುಲ್ ಗಾಂಧಿ ಏನು ಹೇಳುತ್ತಿದ್ದಾರೆಂದು ಅವರಿಗೆ ಅರ್ಥವಾಗುತ್ತಿಲ್ಲ. ಅದು ನಿಜವಾದ ಸಮಸ್ಯೆ. ಅವರು ಅಪಕ್ವತೆಯಿಂದ ಮಾತನಾಡುತ್ತಾರೆ ಎಂದು ದೂರಿದ್ದಾರೆ.
ನಾವು ಅವರನ್ನು ಖುದ್ದಾಗಿ ವಿನಂತಿಸಿದ್ದೇವೆ. ಆದಾಗ್ಯೂ, ಅವರು ಸದನವನ್ನು ಮುಂದುವರಿಸಲು ಅನುಮತಿಸುವುದಿಲ್ಲ ಎಂದು ಸಚಿವ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಕೋವಿಡ್ ವಿಷಯದ ಬಗ್ಗೆ ಸರ್ಕಾರ ಚರ್ಚಿಸಿದೆ ಎಂದು ಹೇಳಿದರು. ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅವರು ಸಹಕರಿಸಲಿಲ್ಲ. ಇದು ದುರಾದೃಷ್ಟಕರ ಎಂದಿದ್ದಾರೆ.