ನವದೆಹಲಿ:ಅವ್ರೋ -748 ವಿಮಾನಗಳ ಬದಲಿಗೆ ಸಿ -295 ಮಧ್ಯಮ ಸಾರಿಗೆಯ 56 ವಿಮಾನಗಳನ್ನು ಖರೀದಿಸಲು ಭಾರತೀಯ ವಾಯುಪಡೆ ಮುಂದಾಗಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ರಕ್ಷಣಾ ಸಚಿವಾಲಯ ಸುಮಾರು 20 ಸಾವಿರ ಕೋಟಿ ರೂ. ವೆಚ್ಚದ ಏರ್‌ಬಸ್ - ಟಾಟಾ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.
ಎರಡು ವಾರಗಳ ಹಿಂದೆ ಭದ್ರತೆಗೆ ಸಂಬಂಧಿಸಿದ ಕ್ಯಾಬಿನೆಟ್ ಸಮಿತಿಯು ದೀರ್ಘಾವಧಿಯ ಬಾಕಿ ಸಂಗ್ರಹಣೆ ಅನುಮೋದಿಸಿದೆ. ಇದರಡಿ, ಒಪ್ಪಂದಕ್ಕೆ ಸಹಿ ಹಾಕಿದ 48 ತಿಂಗಳಲ್ಲಿ 16 ವಿಮಾನಗಳನ್ನು ತಲುಪಿಸಲಾಗುತ್ತದೆ.
ಉಳಿದ 40 ವಿಮಾನಗಳನ್ನು ಭಾರತದಲ್ಲಿ ಏರ್ ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಒಕ್ಕೂಟವು ಒಪ್ಪಂದಕ್ಕೆ ಸಹಿ ಹಾಕಿದ 10 ವರ್ಷಗಳಲ್ಲಿ ತಯಾರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
C-295 MW ವಿಮಾನವು 5 ರಿಂದ 10 ಟನ್ ಸಾಮರ್ಥ್ಯದ ಸಾರಿಗೆ ವಿಮಾನವಾಗಿದೆ. ಮಿಲಿಟರಿ ವಿಮಾನವನ್ನು ಭಾರತದಲ್ಲಿ ಖಾಸಗಿ ಕಂಪನಿ ತಯಾರಿಸುವ ಮೊದಲ ಯೋಜನೆ ಇದಾಗಿದೆ. ಎಲ್ಲ 56 ವಿಮಾನಗಳಿಗೆ ಸ್ಥಳೀಯ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಅಳವಡಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಅವ್ರೊ ಬದಲಿ ಕಾರ್ಯಕ್ರಮಕ್ಕೆ ತಾತ್ವಿಕ ಅನುಮೋದನೆಯನ್ನು ಸುಮಾರು ಒಂಬತ್ತು ವರ್ಷಗಳ ಹಿಂದೆ ನೀಡಲಾಯಿತು. ಏರೋಸ್ಟ್ರಕ್ಚರ್‌ನ ಹೆಚ್ಚಿನ ಬಿಡಿ ಭಾಗಗಳನ್ನು ದೇಶದಲ್ಲೇ ತಯಾರಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಬಿಎಸ್ಎಫ್ ಯೋಧರ ನಡುವೆಯೇ ಗುಂಡಿನ ಚಕಮಕಿ: ಇಬ್ಬರ ಬಲಿ, ಓರ್ವನ ಸ್ಥಿತಿ ಗಂಭೀರ!
ವಿತರಣೆ ಪೂರ್ಣಗೊಳ್ಳುವ ಮುನ್ನ C-295MW ವಿಮಾನದ ಸರ್ವಿಸ್ ಸೌಲಭ್ಯವನ್ನು ಭಾರತದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಹೇಳಿತ್ತು. ಈ ಸೌಲಭ್ಯವು C-295 ವಿಮಾನದ ವಿವಿಧ ರೂಪಾಂತರಗಳ ಪ್ರಾದೇಶಿಕ MRO (ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ) ದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.