ನವದೆಹಲಿ: ಭಾರತದ ಕರಾವಳಿಯಲ್ಲಿ ಎದುರಾಗುವ ಅನೇಕ ಸಮಸ್ಯೆಗಳನ್ನು ಅನೇಕ ಸಂಸ್ಥೆಗಳು ನಿಭಾಯಿಸುತ್ತಿದ್ದು, ಅವುಗಳ ನಡುವೆ ಮಾಹಿತಿ ಹಂಚಿಕೆಗೆ ಸಹಕಾರಿಯಾಗುವಂತೆ ಮತ್ತು ಆದಷ್ಟು ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಲು ಹೊಸದಾಗಿ ಹುದ್ದೆಯನ್ನು ಸೃಷ್ಟಿ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಮುಖ ಜಾಗತಿಕ ಶಕ್ತಿಯಾಗಿ ಮಾರ್ಪಾಡಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಕೂಡಾ ಸಾಗರೋತ್ತರವಾಗಿ ಶಕ್ತಿಯನ್ನು ಬಲಪಡಿಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಕಡಲ ಭದ್ರತಾ ಸಂಯೋಜಕರನ್ನು (National Maritime Security Coordinator) ನೇಮಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಡಲ ಭದ್ರತಾ ಸಂಯೋಜಕರ ಸ್ಥಾನಕ್ಕೆ ಭಾರತೀಯ ನೌಕಾಪಡೆಯ ನಿವೃತ್ತ ಅಥವಾ ಸೇವೆ ಸಲ್ಲಿಸುತ್ತಿರುವ ವೈಸ್ ಅಡ್ಮಿರಲ್ ಅವರನ್ನು ಆಯ್ಕೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಂಯೋಜಕರು ರಾಷ್ಟ್ರೀಯ ಕಡಲ ಆಯೋಗದ (ಎನ್‌ಎಂಸಿ) ಮುಖ್ಯಸ್ಥರಾಗಿರುತ್ತಾರೆ.