ರಾಯಪುರ(ಛತ್ತೀಸ್ಗಢ):ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ರೈತರ ಆಂದೋಲನದ ವಿಷಯದಲ್ಲಿ ಮಾತುಕತೆಗೆ ನಾವು ಬದ್ಧವಾಗಿದ್ದೇವೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಪುರದಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಟಿಕಾಯತ್ ಕೇಂದ್ರ ಸರ್ಕಾರವು ಮಾಧ್ಯಮಗಳಿಗೆ ಸುಳ್ಳು ಹೇಳುತ್ತಿದೆ. ಅದು ಷರತ್ತುಬದ್ದ ಮಾತುಕತೆಗಳನ್ನು ಮಾತ್ರ ನಡೆಸುತ್ತದೆ. ಇದರಲ್ಲಿ ರೈತರು ಭಾಗವಹಿಸುವುದಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ಕಾಯ್ದೆ ರಚಿಸಿದ್ದು, ರೈತರು ಸಹಿ ಹಾಕಬೇಕೆಂಬುದು ಕೇಂದ್ರ ಸರ್ಕಾರದ ಒತ್ತಾಯ ಮಾಡುತ್ತಿದೆ ಎಂದು ಟಿಕಾಯತ್ ಹೇಳಿದ್ದಾರೆ.
ಮಾಧ್ಯಮಗಳ ಬಗ್ಗೆ ಹೇಳಿದ್ದು..
'ನಮ್ಮ ಮುಂದಿನ ಗುರಿ ಮಾಧ್ಯಮಗಳು' ಎಂದು ಹೇಳಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾವು ಮಾಧ್ಯಮಗಳ ವಿರುದ್ಧವಾಗಿ ಏನನ್ನೂ ಮಾತನಾಡಿಲ್ಲ. ಕೇಂದ್ರ ಸರ್ಕಾರದ ಮುಂದಿನ ಗುರಿ ಮಾಧ್ಯಮಗಳು ಎಂದು ಹೇಳಿದ್ದೇನೆ ಎಂದು ಟಿಕಾಯತ್ ಸ್ಪಷ್ಟನೆ ನೀಡಿದ್ದಾರೆ.
ಎಲ್ಲರೂ ನಮ್ಮೊಂದಿಗೆ ಸೇರಬೇಕು. ಕೇಂದ್ರದ ಮುಂದಿನ ಗುರಿ ಮಾಧ್ಯಮ ಸಂಸ್ಥೆಗಳಾಗಿರುತ್ತವೆ. ನೀವು ಉಳಿಯಬೇಕೆಂದರೆ ನಮ್ಮೊಂದಿಗೆ ಕೈಜೋಡಿಸಿ, ಇಲ್ಲದಿದ್ದರೆ ನಿಮಗೂ ತೊಂದರೆಯಾಗುತ್ತದೆ. ನಾವು ಛತ್ತೀಸ್ಗಢದ ರೈತರ ಸಮಸ್ಯೆಗಳ ವಿರುದ್ಧ ಹೋರಾಡಲಿದ್ದೇವೆ. ಕನಿಷ್ಠ ಬೆಂಬಲ ಬೆಲೆ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ ಎಲ್ಲರೂ ಹೋರಾಡೋಣ ಎಂದು ಟಿಕಾಯತ್ ಕರೆ ನೀಡಿದ್ದಾರೆ.
ಇದನ್ನೂ ಓದಿ:ದಕ್ಷಿಣ ಕೊರಿಯಾದೊಂದಿಗೆ ಶಾಂತಿ ಮಾತುಕತೆಯಾಡುತ್ತಿದೆ ಕಿಮ್ ರಾಷ್ಟ್ರ: ಪ್ಲಾನ್ ಏನು ಗೊತ್ತಾ?