ನವದೆಹಲಿ:ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದಾಗಿ 27 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು (ಮಂಗಳವಾರ) ಲೋಕಸಭೆಯಲ್ಲಿ ಮಂಡಿಸಿತು. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ವಿಧೇಯಕವನ್ನು ಸದನಕ್ಕೆ ಪರಿಚಯಿಸಿದರು. ಇದು ಅಂಗೀಕಾರವಾದಲ್ಲಿ ಲೋಸಕಭೆಯಲ್ಲಿ ಮಹಿಳೆಯರ ಸಂಕ್ಯೆ 181ಕ್ಕೆ ಏರಲಿದೆ.
ಹೊಸ ಸಂಸತ್ ಭವನದಲ್ಲಿ ಕಲಾಪ ಆರಂಭವಾದ ಮೊದಲ ದಿನವೇ ಮಹತ್ವದ ಮಸೂದೆಯನ್ನು ಸರ್ಕಾರ ಮಂಡನೆ ಮಾಡಿದೆ. ಇದಕ್ಕೆ 'ನಾರಿ ಶಕ್ತಿ ವಂದನ್ ಅಧಿನಿಯಂ' ಎಂದು ಹೆಸರಿಡಲಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಅಂದರೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆ ಇದಾಗಿದೆ. 2010 ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಎಲ್ಲ ಪಕ್ಷಗಳು ಸರ್ವಸಮ್ಮತದಿಂದ ವಿಧೇಯಕಕ್ಕೆ ಒಪ್ಪಿಗೆ ನೀಡಲಿದ್ದು, ಸುಗಮವಾಗಿ ಬಿಲ್ ಪಾಸ್ ಆಗಲಿದೆ.
ಹೊಸ ಸಂಸತ್ತಿನಲ್ಲಿ ಮಂಡಿಸಿದ ಮೊದಲ ಮಸೂದೆ:ಹಳೆಯ ಸಂಸತ್ತಿನಿಂದ ಹೊಸ ಸಂಸತ್ ಭವನಕ್ಕೆ ಕಲಾಪವನ್ನು ಇಂದು ವರ್ಗ ಮಾಡಲಾಗಿದೆ. ಇಲ್ಲಿ ನಡೆದ ಮೊದಲ ಕಲಾಪದಲ್ಲೇ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸಲಾಗಿದ್ದು, ಹೊಸ ಸಂಸತ್ ಕಟ್ಟಡದಲ್ಲಿ ಮಂಡಿಸಿದ ಮೊದಲ ಬಿಲ್ ಇದಾಗಿದೆ.
ರಾಜ್ಯ ಮತ್ತು ರಾಷ್ಟ್ರಮಟ್ಟದ ನೀತಿ ನಿರೂಪಣೆಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಗೆ ಇದು ಅವಕಾಶ ನೀಡಲಿದೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಸಾಧಿಸಲು ನಾರಿ ಶಕ್ತಿ ವಂದನ್ ಅಧಿನಿಯಂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸರ್ಕಾರ ಹೇಳಿದೆ.
ಅಂಗೀಕಾರಕ್ಕಿಲ್ಲ ಅಡ್ಡಿ:ಹಳೆಯ ಮಸೂದೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಿ ಮಂಡಿಸಲಾಗಿರುವ ಈ ವಿಧೇಯಕದ ಅಂಗೀಕಾರಕ್ಕೆ ಯಾವುದೇ ಅಡ್ಡಿಗಳಿಲ್ಲ. ಕಾರಣ ಆಡಳಿತ ಮತ್ತು ವಿಪಕ್ಷಗಳೂ ವಿಧೇಯಕ ಮಂಡನೆಯ ಪರವಾಗಿವೆ. ಹೀಗಾಗಿ ಸರ್ಕಾರ ಚರ್ಚೆಯ ಬಳಿಕ ಯಾವುದೇ ಪ್ರತಿರೋಧವಿಲ್ಲದೇ ಸಲೀಸಾಗಿ ಮಸೂದೆಗೆ ಒಪ್ಪಿಗೆ ಪಡೆಯಲಿದೆ.