ನವದೆಹಲಿ:ರೈತರು ಬೆಳೆದ ಖಾರಿಫ್ ಸೀಸನ್ನ ಕೆಂಪು ಈರುಳ್ಳಿ ಬೆಳೆಯನ್ನು ಖರೀದಿಸುವಂತೆ ಮತ್ತು ಹಾಗೆ ಖರೀದಿಸಿದ ಮಾಲನ್ನು ಅದರ ಬಳಕೆ ಪ್ರದೇಶಗಳಿಗೆ ಸಾಗಿಸುವ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಸೂಚಿಸಿದೆ. ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕುಸಿತ ತಡೆಗಟ್ಟಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ರೈತರಿಂದ ಈರುಳ್ಳಿ ಖರೀದಿಸಲು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ನ್ಯಾಷನಲ್ ಕನ್ಸ್ಯೂಮರ್ಸ್ ಕೋಆಪರೇಟಿವ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NCCF) ಗೆ ಸರ್ಕಾರ ನಿರ್ದೇಶನ ನೀಡಿದೆ.
ಬೆಲೆ ಕುಸಿತದ ಸಮಸ್ಯೆ ನಿವಾರಣೆಗೆ, ಸರಕು ಕಡಿಮೆಯಾದ ಸಮಯದಲ್ಲಿ ಪೂರೈಸಲು ಈರುಳ್ಳಿ ಸಂಗ್ರಹಣೆ ಮತ್ತು ಬೆಲೆ ಸ್ಥಿರೀಕರಣಕ್ಕಾಗಿ ಸರ್ಕಾರ ಈರುಳ್ಳಿ ಖರೀದಿಗೆ ಮುಂದಾಗಿದೆ. ಕಳೆದ ಹತ್ತು ದಿನಗಳಲ್ಲಿ ನಾಫೆಡ್ ರೈತರಿಂದ 100 ಕೆಜಿಗೆ 900 ರೂ.ಗಿಂತ ಹೆಚ್ಚಿನ ದರದಲ್ಲಿ ಸುಮಾರು 4,000 ಟನ್ ಈರುಳ್ಳಿ ಖರೀದಿಸಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮಂಗಳವಾರ ಸಂಜೆ ಹೇಳಿಕೆಯಲ್ಲಿ ತಿಳಿಸಿದೆ. ಭಾರತದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಲಾಸಲ್‌ಗಾಂವ್ ಮಂಡಿಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 1 ರಿಂದ 2 ರೂ.ಗಳಷ್ಟು ಕಡಿಮೆಯಾಗಿದೆ ಎಂದು ವರದಿಗಳು ತಿಳಿಸಿವೆ.
ನಾಫೆಡ್ 40 ಖರೀದಿ ಕೇಂದ್ರಗಳನ್ನು ತೆರೆದಿದೆ. ಈ ಕೇಂದ್ರಗಳಲ್ಲಿ ರೈತರು ತಮ್ಮ ದಾಸ್ತಾನುಗಳನ್ನು ಮಾರಾಟ ಮಾಡಬಹುದು ಮತ್ತು ಆನ್‌ಲೈನ್‌ನಲ್ಲಿ ಹಣ ಪಡೆಯಬಹುದು. ಈ ಕೇಂದ್ರಗಳಿಂದ ಖರೀದಿಸಲಾದ ಈರುಳ್ಳಿಯನ್ನು ದೆಹಲಿ, ಕೋಲ್ಕತ್ತಾ, ಗುವಾಹಟಿ, ಭುವನೇಶ್ವರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿ ನಗರಗಳಿಗೆ ಸಾಗಿಸಲು ನಾಫೆಡ್ ವ್ಯವಸ್ಥೆ ಮಾಡಿದೆ. 2022-23ರಲ್ಲಿ 318 ಲಕ್ಷ ಟನ್ ಈರುಳ್ಳಿ ಉತ್ಪಾದನೆಯಾಗಿದ್ದು, ಕಳೆದ ವರ್ಷ ಉತ್ಪಾದನೆಯಾದ 316.98 ಲಕ್ಷ ಟನ್‌ಗಳನ್ನು ಮೀರಿಸಿದೆ.