ನವದೆಹಲಿ: 2023-2024ರಲ್ಲಿ ಎಥೆನಾಲ್ ಉತ್ಪಾದಿಸಲು ಕಬ್ಬಿನ ರಸ ಬಳಸದಂತೆ ಕೇಂದ್ರ ಸರಕಾರ ಸಕ್ಕರೆ ಕಾರ್ಖಾನೆಗಳಿಗೆ ಗುರುವಾರ ನಿರ್ದೇಶನ ನೀಡಿದೆ. ದೇಶದ ಸಕ್ಕರೆ ಉತ್ಪಾದನೆಯಲ್ಲಿ ಸಂಭವನೀಯ ಕುಸಿತ ತಡೆಗೆ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಪೆಟ್ರೋಲ್ನೊಂದಿಗೆ ಮಿಶ್ರಣ ಮಾಡುವ ಅಗತ್ಯವನ್ನು ಪೂರೈಸಲು ಸಕ್ಕರೆ ಕಾರ್ಖಾನೆಗಳು ಸಕ್ಕರೆ ಉತ್ಪಾದನೆಯ ಉಪ ಉತ್ಪನ್ನವಾದ ಬಿ-ಹೆವಿ ಮೊಲಾಸಿಸ್ನಿಂದ ಎಥೆನಾಲ್ ಉತ್ಪಾದಿಸುವುದನ್ನು ಮುಂದುವರಿಸಬಹುದು ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.
ಪೆಟ್ರೋಲ್ನೊಂದಿಗೆ ಬೆರೆಸಲು ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ತೈಲ ಕಂಪನಿಗಳಿಗೆ ಎಥೆನಾಲ್ ಪೂರೈಸಲಾಗುತ್ತದೆ. ಸಕ್ಕರೆ (ನಿಯಂತ್ರಣ) ಆದೇಶ 1966ರ ಕಲಂ 4 ಮತ್ತು 5ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, 2023-24 ರ ಇಎಸ್ವೈ (ಎಥೆನಾಲ್ ಸರಬರಾಜು ವರ್ಷ) ನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಥೆನಾಲ್ ತಯಾರಿಕೆಗಾಗಿ ಕಬ್ಬಿನ ರಸ / ಸಕ್ಕರೆ ಸಿರಪ್ ಅನ್ನು ಬಳಸದಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
"ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿಗಳು) ಬಿ-ಹೆವಿ ಮೊಲಾಸಿಸ್ನಿಂದ ತಯಾರಿಸಲಾಗುವ ಎಥೆನಾಲ್ ಪೂರೈಕೆ ಮುಂದುವರಿಯುತ್ತದೆ" ಎಂದು ಆಹಾರ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ನಲ್ಲಿ ಪ್ರಾರಂಭವಾದ 2023-24ರ ಋತುವಿನಲ್ಲಿ ರೈತರ ಆದಾಯ ಹೆಚ್ಚಿಸಲು ಕೇಂದ್ರವು ಕಬ್ಬಿನ ಕನಿಷ್ಠ ಬೆಲೆಯನ್ನು ಕ್ವಿಂಟಾಲ್ಗೆ 10 ರೂ ಹೆಚ್ಚಿಸಿ 315 ರೂ.ಗೆ ಏರಿಕೆ ಮಾಡಿತ್ತು.