ಹೈದರಾಬಾದ್: ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ನವದೆಹಲಿಯಲ್ಲಿ ಪ್ರಧಾನಿ ಭೇಟಿ ಮಾಡಿದ ನಂತರ ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದರು. ತೆಲಂಗಾಣ ಸರ್ಕಾರವು ರಾಜ್ಯಪಾಲರ ಕಚೇರಿಯನ್ನು ಗೌರವಿಸಬೇಕು. ಏಕೆಂದರೆ ಅದು ವ್ಯಕ್ತಿಯಲ್ಲ, ಬದಲಿಗೆ ಸಾಂವಿಧಾನಿಕ ಕಚೇರಿಯಾಗಿದೆ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ವಿವರಿಸಲು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ನಂತರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸರ್ಕಾರವು ರಾಜ್ಯಪಾಲರನ್ನು ಅವಮಾನಿಸಲು ಬಯಸಿದರೆ, ಅದನ್ನು ನಾನು ಜನರ ವಿವೇಚನೆಗೆ ಬಿಡುತ್ತೇನೆ. ನಾನೊಬ್ಬ ಮಹಿಳೆ ಮತ್ತು ಸ್ನೇಹಪರ ಗವರ್ನರ್. ಎಂದಿಗೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿಲ್ಲ ಎಂದು ತಿಳಿಸಿದರು.
ಇದನ್ನೂಓದಿ:ಹುಬ್ಬಳ್ಳಿ 'ಲವ್ ಜಿಹಾದ್ ಪ್ರಕರಣ'ಕ್ಕೆ ಟ್ವಿಸ್ಟ್: ಘಟನೆ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ ಯುವತಿ
ರಾಜ್ಯಪಾಲರನ್ನು ಅವಮಾನಿಸಿದ ಘಟನೆಗಳಿವು: 1.ಇತ್ತೀಚೆಗೆ ನಡೆದ ಸಮ್ಮಕ್ಕ ಸರಳಕ್ಕನ ಉತ್ಸವಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ರಾಜ್ಯಪಾಲರನ್ನು ಬರಮಾಡಿಕೊಳ್ಳಲು ಅಲ್ಲಿ ಯಾವುದೇ ಸಚಿವರು ಅಥವಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳೂ ಸಹ ಇರಲಿಲ್ಲ.
2. ಯಾದಗಿರಿ ಎಂದು ಕರೆಯಲಾಗುತ್ತಿರುವ ಯಾದಗಿರಿಗುಟ್ಟದಲ್ಲಿರುವ ಜೀರ್ಣೋದ್ಧಾರಗೊಂಡ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಉದ್ಘಾಟನೆಗೆ ರಾಜ್ಯಪಾಲರನ್ನು ಆಹ್ವಾನಿಸಿರಲಿಲ್ಲ. ದೇವಸ್ಥಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ ನಂತರ ರಾಜ್ಯಪಾಲರು ಒಂದೆರಡು ದಿನ ಅಲ್ಲಿಗೆ ಭೇಟಿ ನೀಡಿದಾಗಲೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರಜೆ ಮೇಲೆ ತೆರಳಿದ್ದರು. ಜಿಲ್ಲಾಧಿಕಾರಿ, ಎಸ್ಪಿ ಅಥವಾ ಸ್ಥಳೀಯ ಸಚಿವರು ಮತ್ತು ಶಾಸಕರೂ ಸಹ ಅಲ್ಲಿಗೆ ಬಂದಿರಲಿಲ್ಲ.
3.ರಾಜ್ಯಪಾಲರ ಕೋಟಾದಡಿ ಕೌಶಿಕ್ ರೆಡ್ಡಿ ಅವರನ್ನು ಎಂಎಲ್‌ಸಿಯನ್ನಾಗಿ ನಾಮನಿರ್ದೇಶನ ಮಾಡುವ ಸರ್ಕಾರದ ಸಲಹೆಯನ್ನು ತಿರಸ್ಕರಿಸಿದ್ದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸೌಂದರರಾಜನ್ ಸ್ಪಷ್ಟಪಡಿಸಿದ್ದಾರೆ. ಆ ಕೋಟಾದಡಿ ನಾಮನಿರ್ದೇಶನಗೊಳ್ಳಲು ಅರ್ಹರಲ್ಲದ ಕಾರಣ ನಾಮಪತ್ರ ತಿರಸ್ಕೃತಗೊಂಡಿದೆ. ನಾನು, ಸಾಂವಿಧಾನಿಕ ಮುಖ್ಯಸ್ಥಳಾಗಿ ಕಾನೂನು ಮತ್ತು ವ್ಯವಸ್ಥೆಯನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.
4. ವಾರಂಗಲ್‌ನ ಎಂಜಿಎಂ ಆಸ್ಪತ್ರೆಯ ಐಸಿಯುನಲ್ಲಿದ್ದ ರೋಗಿಯೊಬ್ಬರಿಗೆ ಇಲಿಗಳು ಕಚ್ಚಿದ್ದರಿಂದ ವಿಚಲಿತನಾಗಿದ್ದೇನೆ ಎಂದು ಹೇಳಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಮೂಲಸೌಕರ್ಯಗಳ ಅಗತ್ಯತೆ ಬಗ್ಗೆ ಬಹಳ ಸಮಯದಿಂದಲೂ ಮಾತನಾಡುತ್ತಿದ್ದೇನೆ. ನಾನು ನೇರವಾಗಿ ಮತ್ತು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತೇನೆ. ಹಾಗೆಯೇ ಸರ್ಕಾರದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇನೆ ಎಂದಿದ್ದಾರೆ.
ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಅವರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಉದ್ದೇಶಪೂರ್ವಕವಾಗಿ ರಾಜ್ಯಪಾಲರನ್ನು ಅವಮಾನಿಸಲಾಗಿದೆ. ಅವರು ಸಾಂವಿಧಾನಿಕ ವ್ಯವಸ್ಥೆಯನ್ನು ಗೌರವಿಸಬೇಕು. ಇದು ಮಹಿಳೆಯನ್ನು ಗೌರವಿಸುವ ಮಾರ್ಗವಲ್ಲ ಎಂದು ಬೇಸರ ಹೊರಹಾಕಿದ್ದಾರೆ.