ಪಾಟ್ನಾ (ಬಿಹಾರ) :ರಾಜಕೀಯದ ಪ್ರಯೋಗಶಾಲೆಯಾಗಿರುವ ಬಿಹಾರ, ಈಗ ಮತ್ತೊಂದು ಮನ್ವಂತರಕ್ಕೆ ತೆರೆದುಕೊಂಡಿದೆ. ದೇಶದಲ್ಲೇ ಮೊದಲ ಜಾತಿಗಣತಿ ನಡೆಸಿದ ಅಲ್ಲಿನ ಸರ್ಕಾರ, ಈಗಿದ್ದ ಮೀಸಲಾತಿ ಕೋಟಾವನ್ನು ಶೇ.60 ರಿಂದ ಶೇ.75ಕ್ಕೆ ಹೆಚ್ಚಿಸಿತ್ತು. ವಿಧಾನಸಭೆ ಅಂಗೀಕರಿಸಿದ ಮಹತ್ವದ ಮಸೂದೆಗೆ ರಾಜ್ಯಪಾಲರೂ ಅಂಕಿತ ಹಾಕಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಗೆಜೆಟ್ ಅಧಿಸೂಚನೆ ಹೊರಬೀಳಲಿದೆ.
ಬಿಹಾರ ವಿಧಾನಸಭೆಯು ಅಂಗೀಕರಿಸಿರುವ ಹೊಸ ಮೀಸಲಾತಿ ಅನ್ವಯ ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ) ಹಾಗೂ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ನೀಡುವ ಮೀಸಲಾತಿಯನ್ನು ಈಗಿನ ಶೇ 50ರಿಂದ ಶೇ 65ಕ್ಕೆ ಹೆಚ್ಚಳವಾಗಲಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್) ಶೇ 10ರಷ್ಟು ರಿಸರ್ವೇಶನ್ ಸಿಗಲಿದೆ.
ಮಸೂದೆಗೆ ರಾಜ್ಯಪಾಲರು ಓಕೆ:ಸಮಾಜದ ದುರ್ಬಲ ವರ್ಗಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ, ಬಿಹಾರ ವಿಧಾನಸಭೆಯು ನವೆಂಬರ್ 8 ರಂದು ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಬಳಿಕ ಅದನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ಮಹತ್ವದ ಮಸೂದೆಗೆ ಗವರ್ನರ್ ರಾಜೇಂದ್ರ ಅರ್ಲೇಕರ್ ಅನುಮೋದನೆ ನೀಡಿದ್ದಾರೆ. ರಾಜ್ಯಪಾಲರು ಸಹಿ ಮಾಡಿ ಮಸೂದೆ ವಾಪಸ್ ಸರ್ಕಾರಕ್ಕೆ ಕಳುಹಿಸಲಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಸರ್ಕಾರ ಗೆಜೆಟ್ ಅಧಿಸೂಚನೆ ಪ್ರಕಟಿಸಲಿದೆ.